ವಯನಾಡ್(ಕೇರಳ): 2024ರ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೆಲುವು ಸಾಧಿಸಿದ್ದಾರೆ. ಈಗ ಯಾವ ಕ್ಷೇತ್ರದ ಸಂಸದರಾಗಿ ಅವರು ಮುಂದುವರೆಯುತ್ತಾರೆ, ಯಾವ ಕ್ಷೇತ್ರವನ್ನು ಬಿಟ್ಟುಕೊಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಎರಡು ದಿನಗಳಿಂದ ಎರಡೂ ರಾಜ್ಯಗಳಿಗೆ ರಾಹುಲ್ ಭೇಟಿ ನೀಡಿ, ತಮ್ಮನ್ನು ಗೆಲ್ಲಿಸಿದ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇದರ ನಡುವೆ ವಯನಾಡ್ ಕ್ಷೇತ್ರವನ್ನೇ ಅವರು ಬಿಟ್ಟುಕೊಡಲಿದ್ದಾರೆ ಎಂಬ ಸುಳಿವು ಪಕ್ಷದ ಮುಖಂಡರು ಕೊಟ್ಟಿದ್ದರೆ, ಈ ವಿಷಯದಲ್ಲಿ ತಾವು ಇನ್ನೂ ಉಭಯ ಸಂಕಟದಲ್ಲಿ ಇರುವುದಾಗಿ ಖುದ್ದಾಗಿ ಸಂಸದ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಗೆದ್ದ ಬಳಿಕ ಮೊದಲ ಬಾರಿಗೆ ಮಂಗಳವಾರ ರಾಯ್ಬರೇಲಿ ಕ್ಷೇತ್ರಕ್ಕೆ ತೆರಳಿದ್ದ ರಾಹುಲ್ ಗಾಂಧಿ, ಇಂದು ಕೇರಳದ ಮಲ್ಲಾಪುರಂಗೆ ಭೇಟಿ ನೀಡಿದರು. ಕಾಂಗ್ರೆಸ್ ಹಾಗೂ ಯುಡಿಎಫ್ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು. ಈ ವೇಳೆ, ಬೃಹತ್ ರೋಡ್ ಶೋ ನಡೆಸಿ, ಸಾರ್ವಜನಿಕ ಸಭೆಯಲ್ಲೂ ಅವರು ಪಾಲ್ಗೊಂಡು ಮಾತನಾಡಿದರು.
ಲೋಕಸಭೆಗೆ ಎರಡನೇ ಅವಧಿಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ವಯನಾಡ್ ಜನತೆಗೆ ಧನ್ಯವಾದ ಅರ್ಪಿಸಿದ ರಾಹುಲ್, ''ನಾನು ಆದಷ್ಟ ಬೇಗ ನಿಮ್ಮನ್ನು ನೋಡಲು ಎದುರು ನೋಡುತ್ತಿದ್ದೆ. ನಾನು ವಯನಾಡ್ ಸಂಸದನಾಗಿ ಮುಂದುವರೆಯಬೇಕೋ ಅಥವಾ ರಾಯ್ ಬರೇಲಿಯ ಸಂಸದನಾಗಿ ಇರಬೇಕೋ ಎಂಬ ಸಂದಿಗ್ಧತೆ ನನ್ನ ಮುಂದೆ ಇದೆ. ಆದರೆ, ನಾನು ನಿಮಗೆ ಹೇಳುವುದೇನೆಂದರೆ, ನನ್ನ ನಿರ್ಧಾರದಿಂದ ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರಗಳಿಗೆ ಜನತೆ ಸಂತೋಷ ಪಡಬೇಕು'' ಎಂದು ಮನವಿ ಮಾಡಿದರು.
ಭಾರತದ ಬಡ ಜನರೇ ನನ್ನ ದೇವರು - ರಾಹುಲ್:ಇದೇ ವೇಳೆ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ''ಚುನಾವಣಾ ಪ್ರಚಾರದ ಸಮಯದಲ್ಲಿ ಮೋದಿ ಅವರು ತಾವು ಜೈವಿಕನಾಗಿ ಜನಿಸಿಲ್ಲ ಮತ್ತು ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವ ದೇವರಿಂದಲೇ ನಾನು ಭೂಮಿಗೆ ಬಂದಿರುವುದು ಎಂದು ಹೇಳಿದ್ದರು. ಪ್ರಧಾನಿ ಹೇಳುವ ರೀತಿಯಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ದೇವರಿಂದ ನಾನು ಯಾವುದೇ ನಿರ್ದೇಶನ ಸ್ವೀಕರಿಸುವುದಿಲ್ಲ. ಮೋದಿ ಅವರು ಅದಾನಿ ಮತ್ತು ಅಂಬಾನಿಯ ಪರವಾಗಿ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ'' ಎಂದು ಟೀಕಿಸಿದರು.
''ದೇಶದ ಪ್ರಮುಖ ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಅದಾನಿ ಅವರಿಗೆ ಹಸ್ತಾಂತರಿಸಲು ಮತ್ತು ರಕ್ಷಣಾ ಕ್ಷೇತ್ರದ ಕೈಗಾರಿಕೋದ್ಯಮಿಗೆ ಸಹಾಯ ಮಾಡಲು 'ಅಗ್ನಿವೀರ್' ಯೋಜನೆ ಜಾರಿ ಮಾಡಲು ಸಹ ದೇವರೇ ಪ್ರಧಾನಿ ಅವರಿಗೆ ನಿರ್ದೇಶನ ನೀಡಿದ್ದೀರಾ?. ದುರದೃಷ್ಟವಶಾತ್, ಅವರಂತೆ ನಾನು ಆ ಸುಖಭೋಗವನ್ನು ಹೊಂದಿಲ್ಲ. ಏಕೆಂದರೆ, ನಾನು ಮನುಷ್ಯ. ದೇವರು ನನಗೆ ಆದೇಶಿಸುವುದಿಲ್ಲ. ನನ್ನ ದೇವರೆಂದರೆ, ಭಾರತದ ಬಡ ಜನರು ಹಾಗೂ ವಯನಾಡಿನ ಜನತೆ. ನಾನು ಜನರೊಂದಿಗೆ ಮಾತನಾಡುತ್ತೇನೆ. ನಾನು ಏನು ಮಾಡಬೇಕೆಂಬುವುದು ಸಹ ಆ ಜನತೆಯೇ ನನಗೆ ಹೇಳುತ್ತಾರೆ" ಎಂದು ರಾಹುಲ್ ಹೇಳಿದರು.