ನವದೆಹಲಿ : ಶುಕ್ರವಾರ ಪ್ರಕಟವಾದ ಬಿಜೆಪಿಯ 195 ಕ್ಷೇತ್ರಗಳ ಲೋಕಸಭಾ ಚುನಾವಣಾ ಪಟ್ಟಿಯಿಂದ ಪಕ್ಷದ ಫೈರ್ ಬ್ರ್ಯಾಂಡ್ ನಾಯಕಿ ಎಂದೇ ಹೆಸರಾಗಿರುವ ಹಾಲಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಹಾಗೂ ಹಾಲಿ ಸಂಸದರಾದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, ರಮೇಶ ಬಿಧುರಿ ಅವರ ಹೆಸರನ್ನು ಕೈಬಿಟ್ಟಿರುವುದು ಗಮನಾರ್ಹ. ಆಗಾಗ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡುವ ಮೂಲಕ ವಿವಾದ ಸೃಷ್ಟಿಸುತ್ತಿದ್ದ ಇವರಿಗೆ ಬಿಜೆಪಿ ಈ ಬಾರಿ ಮಣೆ ಹಾಕದಿರುವುದು ಪಕ್ಷದ ನಿಲುವು ಬದಲಾಗಿರುವುದು ಎದ್ದು ಕಾಣಿಸುತ್ತದೆ.
ಈ ನಾಯಕರು ಸಂಸತ್ತಿನ ಒಳಗೆ ಮತ್ತು ಹೊರಗೆ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಾಗಿ ವಿವಾದಗಳಿಗೆ ಸಿಲುಕಿದ್ದಾರೆ. ಹೀಗಾಗಿ ಬಿಜೆಪಿಯು ಈ ಬಾರಿ 'ಆಪರೇಷನ್ ಕ್ಲೀನ್-ಅಪ್' ಮಾಡಿದಂತೆ ಕಾಣಿಸುತ್ತಿದೆ. ಈ ಮೂಲಕ 31 ರಾಜಕೀಯ ಪಕ್ಷಗಳ ಒಕ್ಕೂಟವಾದ ಇಂಡಿಯಾ ಮೈತ್ರಿಕೂಟವನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
2008 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಗ್ಯಾ ಠಾಕೂರ್ ಅವರಿಗೆ ಟಿಕೆಟ್ ತಪ್ಪಿಸಲಾಗಿದ್ದು, ಅವರ ಬದಲಿಗೆ ಅಲೋಕ್ ಶರ್ಮಾ ಅವರರಿಗೆ ಟಿಕೆಟ್ ನೀಡಲಾಗಿದೆ. ಅನಾರೋಗ್ಯದ ಆಧಾರದ ಮೇಲೆ ಜಾಮೀನಿನ ಮೇಲೆ ಹೊರಬಂದಿದ್ದ ಠಾಕೂರ್, ವಿವಾದದಿಂದ ದೂರವಿರಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ.
ಗಾಂಧೀಜಿಯವರ ಹಂತಕ ನಾಥೂರಾಮ್ ಗೋಡ್ಸೆ 'ದೇಶಭಕ್ತ' ಎಂದು ಕರೆದ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿಕೆ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ಅಲ್ಲದೆ ಈ ಹೇಳಿಕೆಯಿಂದಾಗಿ ಪ್ರಗ್ಯಾ ಸಿಂಗ್ರನ್ನು ಪ್ರಧಾನಿ ಮೋದಿ ತಮ್ಮಿಂದ ದೂರ ಇಟ್ಟಿದ್ದಾರೆ.