ನವದೆಹಲಿ : ಮುಂಗಾರು ಮಾರುತಗಳು ಚುರುಕಾಗಿರುವುದರಿಂದ ಜುಲೈನಲ್ಲಿ ಭಾರತದಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ತಿಳಿಸಿದೆ. ಐಎಂಡಿ ಮುನ್ಸೂಚನೆ ಪ್ರಕಾರ, ಈಶಾನ್ಯ ಭಾರತವನ್ನು ಹೊರತುಪಡಿಸಿ ದೇಶದ ಎಲ್ಲ ಪ್ರದೇಶಗಳಲ್ಲಿ ಜುಲೈನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಶೇಕಡಾ 80 ರಷ್ಟು ಸಂಭವನೀಯತೆ ಇದೆ.
ಮಾನ್ಸೂನ್ ಋತುವಿನ ದ್ವಿತೀಯಾರ್ಧದಲ್ಲಿ ಮಳೆ ಸುರಿಯಲು ಅನುಕೂಲಕರವಾಗುವ 'ಲಾ ನಿನಾ' ಪರಿಣಾಮವು ಪ್ರಭಾವ ಬೀರುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಮಾನ್ಸೂನ್ ಮೇ 30 ರಂದು ಬೇಗನೆ ಕೇರಳ ಮತ್ತು ಈಶಾನ್ಯದಲ್ಲಿ ಆವರಿಸಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಅದರ ಪ್ರಗತಿ ನಿಧಾನವಾಯಿತು. ಇದು ವಾಯುವ್ಯ ಭಾರತದಲ್ಲಿ ಸುಡುವ ತೀವ್ರ ಶಾಖದ ಅಲೆಗಳಿಗೆ ಮತ್ತು ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಬಿಹಾರ, ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ದೀರ್ಘಕಾಲದ ಶುಷ್ಕ ಪರಿಸ್ಥಿತಿಗಳಿಗೆ ಕಾರಣವಾಯಿತು.
"ಜೂನ್ 11 ರಿಂದ ಜೂನ್ 27 ರವರೆಗೆ ದೇಶದಲ್ಲಿ 16 ದಿನಗಳ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ. ಇದು ಒಟ್ಟಾರೆ ಸಾಮಾನ್ಯಕ್ಕಿಂತ ಕಡಿಮೆ ಮಳೆಗೆ ಕಾರಣವಾಯಿತು" ಎಂದು ಮೊಹಾಪಾತ್ರ ಹೇಳಿದರು. ಐಎಂಡಿ ಅಂಕಿ - ಅಂಶಗಳ ಪ್ರಕಾರ, ಜೂನ್ ನಲ್ಲಿ ದೇಶದಲ್ಲಿ 165.3 ಮಿ.ಮೀ ಸಾಮಾನ್ಯ ಮಳೆಗೆ ಬದಲಾಗಿ 147.2 ಮಿ.ಮೀ ಮಳೆಯಾಗಿದೆ. ಇದು ಒಂದು ತಿಂಗಳಲ್ಲಿ ಶೇಕಡಾ 11 ರಷ್ಟು ಮಳೆಯ ಕೊರತೆಯಾಗಿದೆ.