ಅಹಮದಾಬಾದ್: ಗುಜರಾತ್‌ನ ಲೋಥಾಲ್‌ನ ಪುರಾತತ್ವ ಇಲಾಖೆಯ ಸ್ಥಳದಲ್ಲಿ ಬುಧವಾರ ಬೆಳಗ್ಗೆ ಸಂಶೋಧನೆ ನಡೆಸುತ್ತಿದ್ದಾಗ ದಿಢೀರ್ ಮಣ್ಣು ಕುಸಿದು ಐಐಟಿ ದೆಹಲಿಯ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಇತರೆ ಮೂವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಹೆಚ್‌ಡಿ ವ್ಯಾಸಂಗ ಮಾಡುತ್ತಿದ್ದ ಸುರಭಿ ವರ್ಮಾ (23) ಮೃತ ವಿದ್ಯಾರ್ಥಿನಿ. ಅಹಮದಾಬಾದ್‌ನಿಂದ ಸುಮಾರು 80 ಕಿಲೋ ಮೀಟರ್ ದೂರದಲ್ಲಿರುವ ಪುರಾತನ ಸಿಂಧೂ ನಾಗರಿಕತೆಯ ಸ್ಥಳದಲ್ಲಿ ಸಂಶೋಧನೆ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಐಐಟಿ ದೆಹಲಿ ಮತ್ತು ಐಐಟಿ ಗಾಂಧಿನಗರದ ತಲಾ ಇಬ್ಬರು ಸೇರಿ ನಾಲ್ವರು ಸಂಶೋಧಕರ ತಂಡ ಅಧ್ಯಯನಕ್ಕಾಗಿ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಲು ಹರಪ್ಪ ಬಂದರು ನಗರ ಲೋಥಾಲ್‌ಗೆ ತೆರಳಿತ್ತು. ಮಣ್ಣು ಪರೀಕ್ಷೆಗೆಂದು ತೆಗೆದ 10 ಅಡಿ ಆಳದ ಗುಂಡಿಗೆ ನಾಲ್ವರೂ ಇಳಿದಿದ್ದಾರೆ. ಈ ವೇಳೆ ಹಠಾತ್ ಗೋಡೆ ಕುಸಿದು ಮಣ್ಣಿನ ರಾಶಿಯಡಿಯಲ್ಲಿ ಎಲ್ಲರೂ ಹೂತು ಹೋಗಿದ್ದರು.
ಸಂಶೋಧಕಿ ಸುರಭಿ ವರ್ಮಾ ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಓಂ ಪ್ರಕಾಶ್ ಜಾಟ್ ಮಾಹಿತಿ ನೀಡಿದರು.
ಮಣ್ಣು ಜಿಗುಟಾಗಿದ್ದರಿಂದ ಮತ್ತು ನೀರಿನ ಮಟ್ಟ ಹಠಾತ್ ಏರಿದ್ದರಿಂದ ಕೆಸರಿನಲ್ಲಿ ಮುಳುಗಿದ್ದ ಸುರಭಿ ವರ್ಮಾ ಹೊರ ಬರಲಾರದೇ ಉಸಿರುಗಟ್ಟಿ ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಸರಿನಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಸ್ಥಿರವಾಗಿದೆ. ಈ ಪೈಕಿ ದೆಹಲಿ ಐಐಟಿಯ ಪ್ರೊಫೆಸರ್ ಯಮಾ ದೀಕ್ಷಿತ್ (45) ಎಂಬವರ ಆರೋಗ್ಯ ಗಂಭೀರವಾಗಿದೆ. ಉಸಿರಾಟದ ತೊಂದರೆಯಿಂದಾಗಿ ಅವರನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆ ಬಳಿಕ ವೈದ್ಯರ ಸಲಹೆಯಂತೆ ಗಾಂಧಿನಗರದ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ದೀಕ್ಷಿತ್ ಐಐಟಿ ದೆಹಲಿಯ ವಾತಾವರಣ ವಿಜ್ಞಾನ ಕೇಂದ್ರದಲ್ಲಿ (ಸಿಎಎಸ್) ಸಹಾಯಕ ಪ್ರಾಧ್ಯಾಪಕರಾಗಿದ್ದು, ಸುರ್ಭಿ ವರ್ಮಾ ಅವರ ನಿರ್ದೇಶನದಲ್ಲಿ ಸಂಶೋಧನೆ ನಡೆಸುತ್ತಿದ್ದರು. ತಂಡದ ಇತರ ಇಬ್ಬರು ಸದಸ್ಯರಾದ ಅಸೋಸಿಯೇಟ್ ಪ್ರೊಫೆಸರ್ ವಿ.ಎನ್.ಪ್ರಭಾಕರ್ ಮತ್ತು ಹಿರಿಯ ಸಂಶೋಧಕಿ ಶಿಖಾ ರೈ ಕೂಡ ಸ್ಥಳದಲ್ಲಿದ್ದರು ಎಂದು ಎಸ್‌ಪಿ ಓಂ ಪ್ರಕಾಶ್ ಜಾಟ್ ಹೇಳಿದರು.
ಇದನ್ನೂ ಓದಿ:ಮಣಿಪುರದಲ್ಲಿ ಮೈತೇಯಿ ಸಮುದಾಯದ ವ್ಯಕ್ತಿ ಕಾಣೆ, ಇಂಫಾಲ್ ಪಶ್ಚಿಮ ಜಿಲ್ಲೆ ಉದ್ವಿಗ್ನ