ತುಮಕೂರು: ರೈತರೊಬ್ಬರ ಜಮೀನಿನ ಖಾತೆ ಮತ್ತು ಪಹಣಿ ವರ್ಗಾವಣೆ ಮಾಡಿಕೊಡಲು ಲಂಚ ಪಡೆದ ಇಟ್ಟಿದ್ದ ಗ್ರಾಮ ಪಂಚಾಯತ್ ಇಬ್ಬರು ಅಧಿಕಾರಿಗಳಿಗೆ ನ್ಯಾಯಾಲಯ ತಲಾ ಮೂರುವರೆ ವರ್ಷ ಕಠಿಣ ಕಾರಾಗೃಹ ಶಿಕ್ಷೆ ದಂಡ ವಿಧಿಸಿ ತೀರ್ಪು ನೀಡಿದೆ.
ಹೆಗ್ಗರೆ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿಯಾಗಿದ್ದ ರಶ್ಮಿ ಮತ್ತು ಗ್ರಾಮ ಸಹಾಯಕ ಹೆಚ್. ಎನ್. ಪ್ರಕಾಶ್ ಅವರ ಮೇಲಿನ ಆರೋಪ ಸಾಬೀತಾಗಿದೆ. ಮೊದಲ ಆರೋಪಿಗೆ 20 ಸಾವಿರ ರೂ. ದಂಡ, ಎರಡನೇ ಆರೋಪಿಗೆ 10 ಸಾವಿರ ರೂ. ದಂಡ ವಿಧಿಸಿದೆ.
ಪ್ರಕರಣದ ವಿವರ: ಭೀಮಸಂದ್ರ ಗ್ರಾಮದ ವಾಸಿ ದೂರುದಾರರಾದ ಡಿ. ನಾಗರಾಜು ಎಂಬುವರು ಭೀಮಸಂದ್ರ ಗ್ರಾಮದ ಸರ್ವೆ ನಂಬರ್ನಲ್ಲಿ 03 ಗುಂಟೆ ಜಮೀನನ್ನು ಕ್ರಯಕ್ಕೆ ಖರೀದಿ ಮಾಡಿದ್ದರು. ಈ ಜಮೀನಿನ ಖಾತೆ ಮತ್ತು ಪಹಣಿ ವರ್ಗಾವಣೆ ಮಾಡಿಕೊಡಲು ಹೆಗ್ಗರೆ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿಯಾಗಿದ್ದ ರಶ್ಮಿ 12,000/- ರೂ. ಲಂಚದ ಹಣಕ್ಕೆ ಬೇಡಿಕೆ ಇರಿಸಿದ್ದರು. 2021ರ ಸೆಪ್ಟೆಂಬರ್ 28 ರಂದು ಮದ್ಯಾಹ್ನ ಹೆಗ್ಗೆರೆಯಲ್ಲಿರುವ ತಮ್ಮ ಕಚೇರಿಯಲ್ಲಿ ಹೆಚ್. ಎನ್. ಪ್ರಕಾಶ್ ಗ್ರಾಮ ಸಹಾಯಕ ಅವರ ಮೂಲಕ ದೂರುದಾರರಿಂದ 2000/- ರೂ. ಲಂಚದ ಹಣವನ್ನು ಮುಂಗಡವಾಗಿ ಪಡೆದುಕೊಂಡಿದ್ದರು.
ಉಳಿದ 8,000 ರೂ. ಲಂಚದ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ನಾಗರಾಜು ಅವರಿಗೆ ಅಧಿಕಾರಿಗಳಿಗೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಷ್ಟವಿಲ್ಲದೇ 2021ರ ಸೆಪ್ಟೆಂಬರ್ 29 ರಂದು ತುಮಕೂರು ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಡಿವೈಎಸ್ಪಿ ಮಲ್ಲಿಕಾರ್ಜುನ ಚುಕ್ಕಿ ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸ್ ನಿರೀಕ್ಷಕ ಬೀರೇಂದ್ರ ಎನ್. ನೇತೃತ್ವದ ತಂಡ ದಾಳಿ ನಡೆಸಿದ್ದರು. ಆ ವೇಳೆ ಕಸಬಾ ಹೋಬಳಿ ಕಂದಾಯ ನಿರೀಕ್ಷಕರ ಕಚೇರಿ ಮುಂಭಾಗ ಹೆಚ್. ಎನ್. ಪ್ರಕಾಶ್ ಅವರು 8,000 ರೂ. ಲಂಚದ ಹಣವನ್ನು ದೂರುದಾರರಿಂದ ಪಡೆಯುತ್ತಿದ್ದರು.
ಪೊಲೀಸರ ತಂಡ ತನಿಖೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಸಿ. ಪಿ. ರಾಮಲಿಂಗೇಗೌಡ ಅವರು ವಿಚಾರಣೆ ನಡೆಸಿ ಆರೋಪಿ ಗ್ರಾಮ ಆಡಳಿತಧಿಕಾರಿ ರಶ್ಮಿ ಎಂ. ಎನ್., 2ನೇ ಆರೋಪಿ ಗ್ರಾಮ ಸಹಾಯಕ ಹೆಚ್. ಎನ್. ಪ್ರಕಾಶ್ರನ್ನು ದೋಷಿಗಳು ಎಂದು ಘೋಷಿಸಿದ್ದಾರೆ.
ಈ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯ ಪರವಾಗಿ ಶ್ರೀ ಎನ್. ಬಸವರಾಜು, ವಿಶೇಷ ಸಾರ್ವಜನಿಕ ಅಭಿಯೋಜಕರು, ಕರ್ನಾಟಕ ಲೋಕಾಯುಕ್ತ, ತುಮಕೂರು ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ:ತುಮಕೂರು ಆರ್ಟಿಓ ಕಚೇರಿ ಮೇಲೆ ಲೋಕಾಯುಕ್ತ ದಾಳಿ