ಮುಂಬೈ (ಮಹಾರಾಷ್ಟ್ರ):ಅಧಿಕಾರ ದುರ್ಬಳಕೆ ಆರೋಪ ಎದುರಿಸುತ್ತಿರುವ ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ದಿನಕ್ಕೊಂದು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕೆಂಪು ದೀಪ ಬಳಸಿದ್ದ ವೈಯಕ್ತಿಕ ಕಾರನ್ನು ಪುಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಮತ್ತೊಂದೆಡೆ, ಪುಣೆ ಮುನ್ಸಿಪಲ್ ಕಾರ್ಪೊರೇಷನ್, ಪೂಜಾ ಅವರ ತಾಯಿ ಮನೋರಮಾ ಅವರಿಗೆ ಸೇರಿದ ಮನೆ ಅಕ್ರಮವಾಗಿ ನಿರ್ಮಾಣವಾಗಿದೆ ಎಂದು ನೋಟಿಸ್ ನೀಡಿದೆ.
ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ನಡೆಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಇದರ ಜೊತೆಗೆ, ಐಎಎಸ್ ಅಧಿಕಾರಿಯಾಗಿ ನೇಮಕವಾದ ವೇಳೆ ಕೇಂದ್ರ ಲೋಕಸೇವಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಸ್ತೆ ನಿಯಮ ಉಲ್ಲಂಘಿಸಿದ ಆರೋಪ:ಪೂಜಾ ಖೇಡ್ಕರ್ ಅವರ ಕಾರಿನ ನಂಬರ್ ಪ್ಲೇಟ್ ಮೇಲೆ 'ಗವರ್ನಮೆಂಟ್ ಆಫ್ ಮಹಾರಾಷ್ಟ್ರ' ಎಂದು ಬರೆದಿದ್ದಲ್ಲದೆ, ಕೆಂಪು ದೀಪವನ್ನೂ ಅಳವಡಿಸಲಾಗಿತ್ತು. ಹಲವು ಬಾರಿ ರಸ್ತೆ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕಾರಿನ ಮಾಲೀಕರಿಗೆ 21 ದಂಡದ ಚಲನ್ಗಳನ್ನು ಕಳುಹಿಸಲಾಗಿದೆ. ಅತಿಯಾದ ವೇಗದ ಚಾಲನೆ, ಸಿಗ್ನಲ್ ಉಲ್ಲಂಘನೆ ಸೇರಿ 21 ಆರೋಪಗಳ ಬಾಕಿ ದಂಡ ಪಾವತಿಸಬೇಕಿದೆ. ಹೀಗಾಗಿ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೂಜಾ ತಾಯಿಗೆ ನೋಟಿಸ್:ಅಧಿಕಾರಿ ಪೂಜಾ ಅವರ ತಾಯಿ ಮನೋಹರ್ ಖೇಡ್ಕರ್ ಅವರು ಈ ಹಿಂದೆ ಬಹಿರಂಗವಾಗಿ ಪಿಸ್ತೂಲ್ ತೋರಿಸಿ ರೈತರನ್ನು ಹೆದರಿಸಿದ ಘಟನೆಗೆ ಸಂಬಂಧಿಸಿದಂತೆ, ಪಿಸ್ತೂಲ್ಗೆ ನೀಡಿದ ಪರವಾನಗಿಯನ್ನು ಏಕೆ ರದ್ದು ಮಾಡಬಾರದು ಎಂದು ಪ್ರಶ್ನಿಸಿ ಈ ಕುರಿತ ನೋಟಿಸ್ ಅನ್ನು ಅವರ ಮನೆಗೆ ಪೊಲೀಸರು ಅಂಟಿಸಿದ್ದಾರೆ.