ನಾಗ್ಪುರ (ಮಹಾರಾಷ್ಟ್ರ) : ನನಗೆ ಪ್ರಧಾನಿ ಹುದ್ದೆಯ ಆಫರ್ ನೀಡಲಾಗಿತ್ತು, ಆದರೆ ನಾನದನ್ನು ನಿರಾಕರಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶನಿವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
"2024 ರ ಲೋಕಸಭಾ ಚುನಾವಣೆಗೆ ಮೊದಲು ವಿರೋಧ ಪಕ್ಷದ ನಾಯಕರೊಬ್ಬರು ನನ್ನನ್ನು ಸಂಪರ್ಕಿಸಿ ನನ್ನನ್ನು ಪ್ರಧಾನಿಯನ್ನಾಗಿ ಮಾಡಲು ಬೆಂಬಲಿಸುವುದಾಗಿ ಹೇಳಿದರು. ಆದರೆ ನಾನು ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿಲ್ಲ ಎಂದು ಹೇಳಿ ಪ್ರಸ್ತಾಪವನ್ನು ನಿರಾಕರಿಸಿದ್ದೆ" ಕೇಂದ್ರ ಗಡ್ಕರಿ ಶನಿವಾರ ಹೇಳಿದ್ದಾರೆ.
"ಒಂದು ಆಶ್ಚರ್ಯಕರ ಘಟನೆ ನಡೆದಿತ್ತು. ಈ ವಿಷಯದಲ್ಲಿ ಯಾರದೇ ಹೆಸರನ್ನು ನಾನು ಹೇಳಲಾರೆ. ನನ್ನನ್ನು ಸಂಪರ್ಕಿಸಿದ ವ್ಯಕ್ತಿಯು, ನೀವು ಪ್ರಧಾನಿಯಾಗುವುದಾದರೆ ನಾವು ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು" ಎಂದು ಗಡ್ಕರಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು.
"ಆದರೆ, ನೀವು ನನ್ನನ್ನು ಏಕೆ ಬೆಂಬಲಿಸಲು ಬಯಸುತ್ತಿರುವಿರಿ ಮತ್ತು ನಾನು ನಿಮ್ಮ ಬೆಂಬಲವನ್ನು ಏಕೆ ತೆಗೆದುಕೊಳ್ಳಬೇಕು ಎಂದು ಕೇಳಿದೆ. ಪ್ರಧಾನಿಯಾಗುವುದು ನನ್ನ ಜೀವನದ ಗುರಿಯಲ್ಲ. ನಾನು ನನ್ನ ಸಿದ್ಧಾಂತಗಳು ಮತ್ತು ಸಂಘಟನೆಗೆ ನಿಷ್ಠನಾಗಿದ್ದೇನೆ. ಹೀಗಾಗಿ ಯಾವುದೋ ಹುದ್ದೆಗಾಗಿ ನನ್ನ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಳ್ಳಲಾರೆ ಎಂದು ಹೇಳಿದ್ದೆ" ಎಂದು ಅವರು ಹೇಳಿದರು. ತಮ್ಮ ಭಾಷಣದಲ್ಲಿ, ಅವರು ಪತ್ರಿಕೋದ್ಯಮ ಮತ್ತು ರಾಜಕೀಯ ಎರಡರಲ್ಲೂ ನೈತಿಕತೆಯ ಮಹತ್ವವನ್ನು ಒತ್ತಿಹೇಳಿದರು.