ಹೈದರಾಬಾದ್ (ತೆಲಂಗಾಣ): ತಮಾಷೆಯೂ ಕೆಲವೊಮ್ಮೆ ಜೀವಕ್ಕೆ ಕುತ್ತು ತರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಾಯಿಯ ಜೊತೆ ಕೀಟಲೆ ಮಾಡುವಾಗ ಯುವಕನೊಬ್ಬ ಆಯತಪ್ಪಿ ಹೋಟೆಲ್ನ ಮೂರನೇ ಮಹಡಿಯಿಂದ ಹಾರಿ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಆಂಧ್ರಪ್ರದೇಶದ ತೆನಾಲಿ ಮೂಲದ ಉದಯ್(23) ಸಾವನ್ನಪ್ಪಿದ ಯುವಕ. ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಚಂದಾನಗರದ ವಿವಿ ಪ್ರೈಡ್ ಕ್ಲಾಸಿಕ್ ಹೋಟೆಲ್ನಲ್ಲಿ ಈ ದುರಂತ ಸಂಭವಿಸಿದೆ.
ಆಗಿದ್ದೇನು?:ಆಂಧ್ರಪ್ರದೇಶದ ಉದಯ್ ಹೈದರಾಬಾದ್ನ ರಾಮಚಂದ್ರಪುರಂ ಅಶೋಕನಗರದಲ್ಲಿ ವಾಸವಾಗಿದ್ದ. ಭಾನುವಾರ ರಜೆ ಇದ್ದ ಕಾರಣ, ತನ್ನ ಸ್ನೇಹಿತರೊಂದಿಗೆ ಚಂದಾನಗರದ ವಿವಿ ಪ್ರೈಡ್ ಕ್ಲಾಸಿಕ್ ಹೋಟೆಲ್ಗೆ ತೆರಳಿದ್ದ. ಹೋಟೆಲ್ನ ಮೂರನೇ ಮಹಡಿಯ ಬಾಲ್ಕನಿಗೆ ಬಂದಾಗ, ಅಲ್ಲೊಂದು ನಾಯಿಯನ್ನು ಕಂಡಿದ್ದಾನೆ. ಮೊದಲು ನಾಯಿಯನ್ನು ಆಟವಾಡಿಸಲು ಮುಂದಾಗಿದ್ದ, ಬಳಿಕ ಶ್ವಾನ ಓಡಿದಾಗ ಅದನ್ನು ಬೆನ್ನಟ್ಟಿದ್ದ. ಈ ವೇಳೆ ನಾಯಿ ತಿರುವಿನತ್ತ ಹೋಗಿದೆ.
ಉದಯ್ ನಾಯಿ ಹಿಂದೆಯೇ ಓಡಿ ಬಂದಿದ್ದ. ಈ ವೇಳೆ ನಾಯಿ ತಪ್ಪಿಸಿಕೊಂಡು ಬೇರೆಡೆ ಹೋಗಿದೆ. ವೇಗ ನಿಯಂತ್ರಿಸಲಾಗದ ಉದಯ್, ನೇರವಾಗಿ ತೆರೆಳಿ ಬಾಲ್ಕನಿ ಕಿಟಕಿಯಿಂದ ಹಾರಿ ಹೊರಕ್ಕೆ ಬಿದ್ದಿದ್ದಾನೆ. ದುರದೃಷ್ಟವಶಾತ್ ಆ ಕಿಟಕಿಗೆ ಗಾಜು ಇರಲಿಲ್ಲ. ಅದರ ಮೂಲಕವೇ ಆತ ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ.