ಕರ್ನಾಟಕ

karnataka

ETV Bharat / bharat

ಪತ್ನಿಯ ಕಿರುಕುಳಕ್ಕೆ ಬೇಸತ್ತು ಮನೆಯಿಂದ ಓಡಿ ಹೋದ ಪತಿ; ಇದು ಕಥೆ ಅಲ್ಲ, ವ್ಯಥೆ!

ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ಮನೆ ಬಿಟ್ಟು ಹೋದ ಸುದ್ದಿ ಕೇಳಿರಬಹುದು. ಆದರೆ, ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಮನೆಯಿಂದ ಓಡಿ ಹೋದ ಸುದ್ದಿ ಎಲ್ಲಾದರು ಕೇಳಿದ್ದೀರಾ? ಇಂತಹದ್ದೊಂದು ವಿಚಿತ್ರ ಪ್ರಕರಣ ಉತ್ತರಪ್ರದೇಶದಲ್ಲಿ ನಡೆದಿದೆ.

Husband Wife Controversy Story Railway Employee Quit Job Left Home Due to Wife Torture in Lucknow
ಸಾಂದರ್ಭಿಕ ಚಿತ್ರ (File)

By ETV Bharat Karnataka Team

Published : Nov 30, 2024, 1:15 PM IST

ಲಕ್ನೋ (ಉತ್ತರ ಪ್ರದೇಶ):ಪತ್ನಿಯ ಕಿರುಕುಳಕ್ಕೆ ಬೇಸತ್ತು ಮನೆಯಿಂದ ಓಡಿ ಹೋಗಿದ್ದಲ್ಲದೆ, ಸರ್ಕಾರಿ ನೌಕರಿ ಬಿಟ್ಟು ಖಾಸಗಿ ಬಸ್‌ನಲ್ಲಿ ಜೀವನ ನಡೆಸುತ್ತಿದ್ದ ಪತಿಯನ್ನು ಇಲ್ಲಿನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಘಟನೆ ಉತ್ತರಪ್ರದೇಶದ ರಾಯ್​ಬರೇಲಿಯಲ್ಲಿ ನಡೆದಿದ್ದು, ಹೆಂಡತಿಯ ಕಾಟದಿಂದ ಮನೆ ತೊರೆದಿದ್ದ ವ್ಯಕ್ತಿಯನ್ನು ಪೊಲೀಸರು ಮೂರು ವರ್ಷದ ಬಳಿಕ ಪತ್ತೆ ಹಚ್ಚಿ ಮನೆಗೆ ಕರೆತಂದಿದ್ದಾರೆ. ಹುಡುಕಾಟದ ವೇಳೆ ಕಾಣೆಯಾಗಿದ್ದ ವ್ಯಕ್ತಿ ರೈಲ್ವೆ ಉದ್ಯೋಗಿ ಎಂಬ ವಿಷಯ ತಿಳಿದು ಅವರೇ ಶಾಕ್​ ಆಗಿದ್ದಾರೆ.

ರಾಯ್​ಬರೇಲಿಯ ಬಚ್ರವಾನ್ ಮೂಲದ ಅಮಿತ್ ಕುಮಾರ್ ಹೆಂಡತಿಯ ಕಾಟದಿಂದ ಮನೆ ತೊರೆದಿದ್ದ ವ್ಯಕ್ತಿಯಾಗಿದ್ದು, ಮೂರು ವರ್ಷದ ಬಳಿಕ ಸಿಕ್ಕಿದ್ದಾರೆ. ಈತ ಲಕ್ನೋದ ಆಲಂಬಾಗ್‌ನಲ್ಲಿ ಪ್ಯಾಸೆಂಜರ್ ಮತ್ತು ಎಸಿ ಕೋಚ್ ರೈಲುಗಳ ಫ್ಯಾಕ್ಟರಿಯಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದರು ಎಂಬ ವಿಷಯ ಪೊಲೀಸರಿಗೆ ಅಚ್ಚರಿ ತರಿಸಿದೆ.

''ತನ್ನ ಪತಿ ಅಮಿತ್ ಕುಮಾರ್ ಅವರನ್ನು ಯಾರೋ ಅಪಹರಣ ಮಾಡಿದ್ದಾರೆ. 14 ಸೆಪ್ಟೆಂಬರ್ 2021ರಂದು ಬೆಳಗ್ಗೆ ಏಳು ಗಂಟೆಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಸ್ವರ್ಣಿಮಾ ದೇವಿ ನ್ಯಾಯಾಲಯದ ಆದೇಶದ ಮೇರೆಗೆ ಬಚ್ರವಾನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು, ಅವರಿಗಾಗಿ ಬಹಳ ಶೋಧ ನಡೆಸಿದ್ದರು. ಮೂರು ವರ್ಷದ ಬಳಿಕ ಅವರನ್ನು ಪತ್ತೆ ಮಾಡಿ ಇದೀಗ ಕರೆತರಲಾಗಿದೆ'' ಎಂದು ಆಲಂಬಾಗ್ ಎಸ್‌ಐ ಶುಭಂ ಮಾಹಿತಿ ನೀಡಿದ್ದಾರೆ.

''ಅಂದು ಮನೆ ತೊರೆದ ಅಮಿತ್ ಕುಮಾರ್, ಕೆಲಸಕ್ಕೆ ತೆರಳದೇ ಬೇರೆ ಕಡೆ ಪಲಾಯನ ಮಾಡಿದ್ದರು. ಹಾಗಾಗಿ ಸಾಕಷ್ಟು ಪ್ರಯತ್ನ ಮಾಡಿದರೂ ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಅವರ ಮೊಬೈಲ್​ ಕೂಡ ಸ್ವಿಚ್​ ಆಫ್​ ಆಗಿತ್ತು. ಪತ್ನಿ ಸ್ವರ್ಣಿಮಾ ಏಳು ವರ್ಷ ಹಳೆಯದಾದ ಆತನ ಒಂದೇ ಒಂದು ಫೋಟೋವನ್ನು ನೀಡಿದ್ದರು. ಅಲ್ಲದೇ ತನ್ನ ಪತಿಯನ್ನು ಯಾರೋ ಕಿಡ್ನಾಪ್ ಮಾಡಿ ಕೊಲೆ ಮಾಡಿರಬಹುದೆಂದು ಅನುಮಾನ ಕೂಡ ವ್ಯಕ್ತಪಡಿಸಿದ್ದರು. ಫೋಟೋದ ಸಹಾಯದಿಂದ ಸಾಕಷ್ಟು ಹುಡುಕಾಟದ ಬಳಿಕ ಖಾಸಗಿ ಬಸ್​ನಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿರುವ ಸುಳಿವು ಸಿಕ್ಕಿತು. ನೋಂದಣಿ ಸಂಖ್ಯೆ ಮೂಲಕ ಆ ಬಸ್ ಮಾಲೀಕರನ್ನು ಸಂಪರ್ಕಿಸಿ ಅಮಿತ್ ಕುಮಾರ್​ನನ್ನು ಹೇಗೋ ಪತ್ತೆ ಮಾಡಲಾಯಿತು. ಸುಮಾರು ಒಂದೂವರೆ ವರ್ಷಗಳಿಂದ ಇದೇ ಬಸ್​ನಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಬಸ್​ ಮಾಲೀಕರು ತಿಳಿಸಿರುವುದಾಗಿ'' ಶುಭಂ ಮಾಹಿತಿ ನೀಡಿದ್ದಾರೆ.

''ಠಾಣೆಗೆ ಕರೆದು ವಿಚಾರಿಸಿದಾಗ ಅಮಿತ್ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಅನುಕಂಪದ ಆಧಾರದ ಹಿನ್ನೆಲೆ ತನಗೆ ರೈಲ್ವೆಯಲ್ಲಿ ಗ್ರೇಡ್ 3 ಕಾರ್ಪೆಂಟರ್ ಆಗಿ ಕೆಲಸ ಸಿಕ್ಕಿದ್ದು, ಪತ್ನಿಯ ಕಿರುಕುಳದಿಂದ ಮನನೊಂದು ತಾನು ಮನೆ ಬಿಟ್ಟು ಹೋಗಿದ್ದು, ಸರ್ಕಾರಿ ನೌಕರಿ ತೊರೆದಿದ್ದು ಎಲ್ಲದರ ಬಗ್ಗೆ ಹೇಳಿಕೊಂಡಿರುವುದಾಗಿ'' ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ರಾತ್ರಿಯಿಡಿ ಬಂಡೆ ಮೇಲೆ ಅವಿತು ಕುಳಿತ ಮಹಿಳೆಯರು; 16 ಗಂಟೆಗಳ ಶೋಧದ ನಂತರ ಪತ್ತೆ; ಇಲ್ಲಿದೆ ಕಾರ್ಯಾಚರಣೆ ಇಂಚಿಂಚು ಮಾಹಿತಿ!

ABOUT THE AUTHOR

...view details