ನವದೆಹಲಿ:ಕಳೆದ 16 ದಿನಗಳಿಂದ ಭಾರತೀಯ ವಿಮಾನಗಳಿಗೆ ಸತತವಾಗಿ ಬರುತ್ತಿರುವ ಹುಸಿ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಓರ್ವ ಶಂಕಿತ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ಯುರೋಪ್ ದೇಶಗಳಿಂದ ಬೆದರಿಕೆ ಬಂದಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ, ಐಪಿ(ಇಂಟರ್ನೆಟ್ ಪ್ರೋಟೋಕಾಲ್) ಅಡ್ರೆಸ್ ಬದಲಾಗಿರುವುದು ಆರೋಪಿಗಳ ಪತ್ತೆಗೆ ಸವಾಲಾಗಿದೆ.
ಬಂಧಿತ ವ್ಯಕ್ತಿ ಇಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಉಳಿದ ಸಾಮಾಜಿಕ ಮಾಧ್ಯಮಗಳ ಮೂಲಕ ಒಡ್ಡಲಾದ ಬೆದರಿಕೆಗಳ ಮೂಲ ಪತ್ತೆಯಾಗುತ್ತಿಲ್ಲ. ಇದಕ್ಕೆ ದುಷ್ಕರ್ಮಿಗಳು ಬಳಸುತ್ತಿರುವ ನಕಲಿ ವರ್ಚುವಲ್ ಪ್ರೈವೆಟ್ ನೆಟ್‌ವರ್ಕ್ (ವಿಪಿಎನ್) ಕಾರಣವಾಗಿದೆ.
ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಯುರೋಪ್ ದೇಶಗಳಿಂದ ವಿಮಾನಗಳಿಗೆ ಬೆದರಿಕೆ ಹಾಕುತ್ತಿರುವ ಬಗ್ಗೆ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳು ನೆಟ್‌ವರ್ಕ್ ಸುರಕ್ಷತಾ ವಿಧಾನವಾದ 'ವಿಪಿಎನ್' ಬಳಸಿರುವುದು ಸ್ಪಷ್ಟ. ಆದರೆ, ಅದನ್ನು ಬೆನ್ನತ್ತುವ ವೇಳೆಗೆ ಐಪಿ ಅಡ್ರೆಸ್ ಬದಲಿಸಲಾಗಿದೆ. ಹೀಗಾಗಿ ಪ್ರಕರಣ ಪ್ರಗತಿ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾ ಸಭೆ:ಸೈಬರ್ ತಜ್ಞರ ನೆರವಿನೊಂದಿಗೆ ಭದ್ರತಾ ಏಜೆನ್ಸಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಬಂದ ಖಾತೆಯ ಹೆಚ್ಚಿನ ವಿವರಗಳನ್ನು ನೀಡಲು ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಹಬ್ಬದ ಸೀಸನ್ ಕಾರಣ, ಪ್ರಯಾಣಿಕರ ಸಂಚಾರ ಹೆಚ್ಚಿರಲಿದೆ. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಬಾಂಬ್ ಬೆದರಿಕೆ ಪರಿಶೀಲನಾ ತಂಡವನ್ನು (BTAC) ನಿಯೋಜಿಸಿದೆ. ಪ್ರಕರಣದಲ್ಲಿ ನೆರವಿಗಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಪ್ರತಿನಿಧಿಗಳ ಸಭೆಯನ್ನು ಕರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.