ಕಾನ್ಫುರ : ದೇಶದಲ್ಲಿ ಹಿಟ್ ಅಂಡ್ ರನ್ ಕೇಸ್ಗಳು ಹೆಚ್ಚಾಗುತ್ತಿವೆ. ಮಹಾರಾಷ್ಟ್ರದಲ್ಲಿ ನಡೆದ ಹಿಟ್ ಅಂಡ್ ರನ್ ಕೇಸ್ ದೇಶಾದ್ಯಂತ ಸದ್ದು ಮಾಡಿತ್ತು. ಆ ಬಳಿಕ ತಮಿಳುನಾಡಿನಿಂದ ಇಂತಹದ್ದೇ ಸುದ್ದಿ ವರದಿಯಾಗಿತ್ತು. ಇದೀಗ ಉತ್ತರಪ್ರದೇಶದ ಕಾನ್ಪುರದಲ್ಲಿ ಹಿಟ್ ಅಂಡ್ ರನ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಾನಮತ್ತ ಕಾರು ಚಾಲಕನೊಬ್ಬ ಸರ್ಕಾರಿ ನೌಕರನ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಇದನ್ನು ಪ್ರಶ್ನಿಸಿದ್ದಕ್ಕೆ ಆತನಿಗೆ ಡಿಕ್ಕಿ ಹೊಡೆದು ಸುಮಾರು 100 ಮೀಟರ್ ವರೆಗೆ ಎಳೆದೊಯ್ದು ಕಾರು ಹರಿಸಿ ಪರಾರಿಯಾಗಿದ್ದಾನೆ. ಘಟನೆಯಲ್ಲಿ ನೀರಾವರಿ ಇಲಾಖೆಯಲ್ಲಿ ನಿಯೋಜನೆಗೊಂಡ ನೌಕರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭೋಲಾ ತಿವಾರಿ ಮೃತ ಯುವಕ. ಘಟನೆಯ ಸಂಪೂರ್ಣ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮತ್ತೊಂದೆಡೆ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನ ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.
ಘಟನೆಯ ವಿವರ:ಕಾನ್ಪುರದ ಕೊಹಣ ಪೊಲೀಸ್ ಠಾಣಾ ವ್ಯಾಪ್ತಿಯ ವಿಐಪಿ ರಸ್ತೆಯಲ್ಲಿ ನೀರಾವರಿ ಇಲಾಖೆಯ ನೌಕರ ಭೋಲಾ ತಿವಾರಿ ಅವರ ಕಾರಿಗೆ ಅಪಘಾತ ಎಸಗಿ ಪರಾರಿಯಾಗಲು ಯತ್ನಿಸಿದ ಕಾರೊಂದನ್ನು ಅಡ್ಡಗಟ್ಟಿ ತಡೆದಿದ್ದಾರೆ. ಈ ವೇಳೆ ಚಾಲಕನನ್ನು ಹೊರ ಬರುವಂತೆ ಆಗ್ರಹಿಸಿದ್ದಾರೆ. ಕಾರಿನಲ್ಲಿ ಪಾನಮತ್ತನಾಗಿದ್ದ ಚಾಲಕ ಕೋಪಗೊಂಡು, ಕಾರು ತಡೆದಿದ್ದ ಭೋಲಾ ತಿವಾರಿ ಮೇಲೆ ಕಾರನ್ನು ಹರಿಸಿ ಸುಮಾರು 100 ಮೀಟರ್ ವರೆಗೆ ಎಳೆದೊಯ್ದಿದ್ದಾನೆ.