ಕರ್ನಾಟಕ

karnataka

ETV Bharat / bharat

ಕಟಾಸ್ ರಾಜ್ ದೇವರ ದರ್ಶನಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ 154 ಹಿಂದೂ ಯಾತ್ರಾರ್ಥಿಗಳು - KATAS RAJ TEMPLE

ಕಟಾಸ್ ರಾಜ್ ದೇವರ ದರ್ಶನ ಪಡೆಯಲು 154 ಹಿಂದೂ ಯಾತ್ರಾರ್ಥಿಗಳ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದೆ.

ಕಟಾಸ್ ರಾಜ್ ದೇವರ ದರ್ಶನಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ 154 ಹಿಂದೂ ಯಾತ್ರಾರ್ಥಿಗಳು
ಕಟಾಸ್ ರಾಜ್ ದೇವರ ದರ್ಶನಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ ಹಿಂದೂ ಯಾತ್ರಾರ್ಥಿಗಳು (ANI)

By ETV Bharat Karnataka Team

Published : Feb 24, 2025, 4:25 PM IST

ನವದೆಹಲಿ: ಮಹಾಶಿವರಾತ್ರಿ ಅಂಗವಾಗಿ ಕಟಾಸ್ ರಾಜ್ ಮಹಾದೇವ್ ದೇವಸ್ಥಾನದ ದರ್ಶನ ಪಡೆಯುವ ಸಲುವಾಗಿ ಸುಮಾರು 154 ಹಿಂದೂ ಯಾತ್ರಾರ್ಥಿಗಳು ಅಮೃತಸರದಿಂದ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಯಾತ್ರಾರ್ಥಿ ಲಲಿತಾ ಅಗರವಾಲ್, "ಮಹಾಶಿವರಾತ್ರಿ ಅಂಗವಾಗಿ ಪಾಕಿಸ್ತಾನದಲ್ಲಿರುವ ಕಟಾಸ್ ರಾಜ್ ಮಹಾದೇವ್ ದೇವಸ್ಥಾನಕ್ಕೆ ಹೋಗುತ್ತಿದ್ದೇವೆ. ಪ್ರತಿವರ್ಷವೂ ನಾವು ಅಲ್ಲಿಗೆ ಭೇಟಿ ನೀಡುತ್ತೇವೆ" ಎಂದರು.

"ಯಾತ್ರಾರ್ಥಿಗಳ ತಂಡ ಕಟಾಸ್ ರಾಜ್ ದೇವಸ್ಥಾನದ ಭೇಟಿಗಾಗಿ ತೆರಳುತ್ತಿದೆ. ಮಹಾಶಿವರಾತ್ರಿ ಅಂಗವಾಗಿ ನಾವು ಅಲ್ಲಿನ ಅಮರ ಕುಂಡದಲ್ಲಿ ಪವಿತ್ರ ಸ್ನಾನ ಮಾಡಲಿದ್ದೇವೆ. ಭಾರತದಲ್ಲಿ ಮಹಾ ಕುಂಭಮೇಳ ನಡೆಯುತ್ತಿರುವ ಈ ಸಮಯದಲ್ಲಿ ನಾವು ದೇವರ ದಯೆಯಿಂದ ಅಲ್ಲಿನ ಅಮರ ಕುಂಡದಲ್ಲಿ ಸ್ನಾನ ಮಾಡಲಿದ್ದೇವೆ" ಎಂದು ಮತ್ತೋರ್ವ ಯಾತ್ರಾರ್ಥಿ ಪಂಡಿತ್ ರಿಪು ಕಾಂತ್ ಗೋಸ್ವಾಮಿ ಹೇಳಿದರು.

"ಈ ಯಾತ್ರೆಗಾಗಿ ದೇಶಗಳ ಮಧ್ಯೆ ಒಪ್ಪಂದ ಆದಾಗಿನಿಂದ ಸುಮಾರು 200 ಜನರಿಗೆ ವೀಸಾ ನೀಡಲಾಗುತ್ತಿದೆ. ಆದರೆ ಪ್ರತಿ ಬಾರಿಯೂ 10 ರಿಂದ 20 ವೀಸಾಗಳು ರದ್ದಾಗುತ್ತಿವೆ. ಪಾಕಿಸ್ತಾನದಲ್ಲಿ ಸಾಕಷ್ಟು ಹಿಂದೂ ದೇವಾಲಯಗಳಿವೆ. ಝೀಲಂನಲ್ಲಿರುವ ಮಾತಾ ಹಿಂಗಲಾಜ್ ಮಂದಿರ ಸೇರಿದಂತೆ ಸಾವಿರ ವರ್ಷದಷ್ಟು ಹಳೆಯದಾದ ದೇವಾಲಯಗಳು ಅಲ್ಲಿವೆ. ನಾವು ಯಾತ್ರೆ ಕೈಗೊಳ್ಳುವುದರಿಂದ ಈ ಬಗ್ಗೆಯೂ ಜಾಗೃತಿ ಮೂಡಿಸಿದಂತಾಗುತ್ತದೆ" ಎಂದು ಗೋಸ್ವಾಮಿ ತಿಳಿಸಿದರು.

ಈಗಾಗಲೇ ನಾಲ್ಕು ಬಾರಿ ಕಟಾಸ್ ರಾಜ್ ಯಾತ್ರೆ ಕೈಗೊಂಡಿರುವ ವೃದ್ಧ ಮಹಿಳಾ ಯಾತ್ರಾರ್ಥಿಯೊಬ್ಬರು ಮಾತನಾಡಿ, "ಜಾರ್ಖಂಡ್, ಉತ್ತರ ಪ್ರದೇಶ, ಬಿಹಾರ, ಬಂಗಾಳ, ಗುಜರಾತ್, ರಾಜಸ್ಥಾನ, ತಮಿಳುನಾಡಿನಿಂದ ಸುಮಾರು 72 ಯಾತ್ರಾರ್ಥಿಗಳು ಕಟಾಸ್ ರಾಜ್‌ಗೆ ಪ್ರಯಾಣಿಸುತ್ತಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಪಾಕಿಸ್ತಾನಿ ಅಧಿಕಾರಿಗಳು 34 ಜನರ ವೀಸಾಗಳನ್ನು ರದ್ದುಗೊಳಿಸಿದ್ದಾರೆ. ಅವರಲ್ಲಿ ಅನೇಕರಿಗೆ ಈ ಬಗ್ಗೆ ಕೊನೆಯ ಕ್ಷಣದಲ್ಲಿ ಮಾಹಿತಿ ಬಂದಿದ್ದು, ಅವರೆಲ್ಲರೂ ಬೇಸರಗೊಂಡಿದ್ದಾರೆ. ಈ ಮುನ್ನ 4 ಬಾರಿ ಅಲ್ಲಿಗೆ ಭೇಟಿ ನೀಡಿದ್ದೇನೆ. ಆದರೆ ಅಲ್ಲಿನ ಮೂಲಸೌಕರ್ಯಗಳು ಎಷ್ಟು ಬೇಕೋ ಅಷ್ಟು ಉತ್ತಮವಾಗಿಲ್ಲ. ಲಾಹೋರ್​ನ ಡೇರಾ ಗುರುದ್ವಾರ ಸಾಹಿಬ್ ಹೊರತುಪಡಿಸಿದರೆ ಉಳಿದುಕೊಳ್ಳಲು ಅಲ್ಲಿ ಯಾವುದೇ ಸ್ಥಳವಿಲ್ಲ. ವರ್ಷಕ್ಕೆ ಎರಡು ಬಾರಿ ತಲಾ 500 ಜನರಿಗೆ ಪಾಕಿಸ್ತಾನ ಪ್ರಯಾಣಕ್ಕೆ ಅವಕಾಶ ನೀಡುವಂತೆ ಮಾಡಬೇಕೆಂದು ಭಾರತ ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ನೇಪಾಳದಲ್ಲಿರುವಂತೆ ಲಾಹೋರ್​ನಲ್ಲಿಯೂ ಮೈತ್ರಿ ಧರ್ಮಶಾಲಾ ಸ್ಥಾಪಿಸಬೇಕು" ಎಂದು ಹೇಳಿದರು.

ಕಟಾಸ್ ರಾಜ್ ದೇವಾಲಯದ ವಿಶೇಷತೆಗಳು: ಕಟಾಸ್ ರಾಜ್ ದೇವಾಲಯ ಸಂಕೀರ್ಣವು ಸತ್ ಗ್ರಹ ಎಂದು ಕರೆಯಲಾಗುವ ಏಳು ದೇವಾಲಯಗಳನ್ನು ಒಳಗೊಂಡಿದೆ. ಹಿಂದೂಗಳಿಗೆ ಪವಿತ್ರವೆಂದು ಹೇಳಲಾಗುವ ಕಟಾಸ್ ಕೊಳವನ್ನು ಏಳು ದೇವಾಲಯಗಳು ಸುತ್ತುವರೆದಿವೆ. ಶಿವನ ಪತ್ನಿ ಸತಿಯ ಮರಣದ ನಂತರ ಶಿವನ ಕಣ್ಣೀರಿನ ಹನಿಯಿಂದ ಈ ದೇವಸ್ಥಾನ ಸೃಷ್ಟಿಯಾಗಿದೆ ಎಂದು ನಂಬಲಾಗಿದೆ. ಪಾಂಡವರು ವನವಾಸದ ಸಮಯದಲ್ಲಿ ಕೆಲ ಕಾಲ ಇಲ್ಲಿ ತಂಗಿದ್ದರು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಕಾಶಿ ವಿಶ್ವನಾಥ ದೇವಾಲಯಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರ ಭೇಟಿ: 3 ದಿನ VIP ದರ್ಶನ ಸ್ಥಗಿತ - KASHI VISHWANATH TEMPLE

ABOUT THE AUTHOR

...view details