ನವದೆಹಲಿ: ಹಿಮಾಚಲ ಪ್ರದೇಶದ ಕಾಂಗ್ರೆಸ್‌ನ 6 ರೆಬಲ್ ನಾಯಕರು ಇಂದು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್‌ನ ಮಾಜಿ ಶಾಸಕರಾದ ರಾಜೇಂದ್ರ ರಾಣಾ, ಸುಧೀರ್ ಶರ್ಮಾ, ದೇವೇಂದ್ರ ಭುಟ್ಟೋ, ಚೈತನ್ಯ ಶರ್ಮಾ, ರವಿ ಠಾಕೂರ್ ಮತ್ತು ಇಂದರ್ ದತ್ ಲಖನ್‌ಪಾಲ್ ಅವರು ಶನಿವಾರ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಕಮಲ ಮುಡಿದರು.
ಈ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ಹಿಮಾಚಲ ಪ್ರದೇಶದ ಬಿಜೆಪಿ ಅಧ್ಯಕ್ಷ ರಾಜೀವ್ ಬಿಂದಾಲ್, ಮಾಜಿ ಸಿಎಂ ಜೈರಾಮ್ ಠಾಕೂರ್ ಮತ್ತು ಬಿಜೆಪಿ ರಾಜ್ಯಸಭಾ ಸಂಸದ ಹರ್ಷ್ ಮಹಾಜನ್ ಉಪಸ್ಥಿತರಿದ್ದರು. ರಾಜ್ಯಸಭಾ ಚುನಾವಣೆ ವೇಳೆ ಈ 6 ಮಂದಿ ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಹರ್ಷ ಮಹಾಜನ್ ಪರ ಮತ ಚಲಾಯಿಸಿದ್ದರು ಎಂಬುದು ಗಮನಾರ್ಹ. ಬಳಿಕ ಸ್ಪೀಕರ್ ಈ ಶಾಸಕರನ್ನು ಅನರ್ಹಗೊಳಿಸಿದ್ದರು. ಚುನಾವಣಾ ಆಯೋಗವು ಈ 6 ಸ್ಥಾನಗಳಿಗೆ ಉಪಚುನಾವಣೆಯನ್ನೂ ಘೋಷಿಸಿದೆ.
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ಎಲ್ಲಾ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಬಂಡಾಯ ಕಾಂಗ್ರೆಸ್ ನಾಯಕರು ಅಡ್ಡ ಮತದಾನ ಮಾಡಿದ್ದರಿಂದ ಈ ನಾಯಕರು ಬಿಜೆಪಿ ಸೇರುವ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಗುರುವಾರ, ಈ 6 ಬಂಡಾಯಗಾರರು ಮತ್ತು 3 ಪಕ್ಷೇತರ ದೆಹಲಿಯಲ್ಲಿ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು.
ಶುಕ್ರವಾರ, ಹಿಮಾಚಲ ಪ್ರದೇಶದ ಮೂವರು ಪಕ್ಷೇತರ ಶಾಸಕರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಮೂವರು ನಾಯಕರು ಕೂಡ ಇಂದು ಬಿಜೆಪಿ ಸೇರಿದ್ದಾರೆ. ನಿನ್ನೆ, ಆಶಿಶ್ ಶರ್ಮಾ, ಹೋಶಿಯಾರ್ ಸಿಂಗ್ ಮತ್ತು ಕೆಎಲ್ ಠಾಕೂರ್ ವಿಧಾನಸಭೆ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಮೂವರು ನಾಯಕರು ದೆಹಲಿಗೆ ತೆರಳಿದ್ದರು. ಈ ವೇಳೆ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಸಿಎಂ ಜೈರಾಮ್ ಠಾಕೂರ್ ಕೂಡ ಶುಕ್ರವಾರ ದೆಹಲಿಗೆ ತೆರಳಿದ್ದರು.
ಹಿಮಾಚಲದಲ್ಲಿ ಸುಮಾರು ಒಂದು ತಿಂಗಳ ಕಾಲ ಮುಂದುವರಿದ ಈ ರಾಜಕೀಯ ಡ್ರಾಮಾ ಫೆಬ್ರವರಿ 27 ರಂದು ರಾಜ್ಯಸಭಾ ಚುನಾವಣೆಯ ನಂತರ ಬಹಿರಂಗವಾಯಿತು ಎಂಬುದು ಗಮನಾರ್ಹ. 6 ಜನ ಕಾಂಗ್ರೆಸ್ ಶಾಸಕರು ಬಂಡಾಯವೆದ್ದು ಅಡ್ಡ ಮತದಾನ ಮಾಡಿದರು. ಇದರಿಂದಾಗಿ 68 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯದಲ್ಲಿ 40 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ರಾಜ್ಯಸಭಾ ಚುನಾವಣೆಯಲ್ಲಿ ಸೋತಿದ್ದರು. 25 ಶಾಸಕರನ್ನು ಹೊಂದಿರುವ ಬಿಜೆಪಿ ಅಭ್ಯರ್ಥಿ 6 ಬಂಡಾಯ ಶಾಸಕರು ಮತ್ತು 3 ಪಕ್ಷೇತರ ಶಾಸಕರ ಬೆಂಬಲದೊಂದಿಗೆ ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದಾದ ನಂತರ ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ಎಲ್ಲಾ ಆರು ಬಂಡಾಯ ಶಾಸಕರನ್ನು ಅನರ್ಹರು ಎಂದು ಘೋಷಿಸಿದರು ಮತ್ತು ಅವರ ಸದಸ್ಯತ್ವವನ್ನು ರದ್ದುಗೊಳಿಸಿದ್ದರು.
ಅದರ ನಂತರ ಸ್ಪೀಕರ್ ನಿರ್ಧಾರವನ್ನು ಬಂಡಾಯ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಅವರ ಅನರ್ಹತೆಯನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಅಡ್ಡ ಮತದಾನದ ನಂತರ, ಬಂಡಾಯ ನಾಯಕ ಮತ್ತು ಇತರ ಮೂವರು ನಾಯಕರು ನಿರಂತರವಾಗಿ ಹಿಮಾಚಲ ಪ್ರದೇಶದಿಂದ ಹೊರಗುಳಿದಿದ್ದರು. ಮೊದಲು ಅವರು ಪಂಚಕುಲದಲ್ಲಿ ತಂಗಿದ್ದರು. ಇದಾದ ಬಳಿಕ ಎಲ್ಲಾ ನಾಯಕರು ಋಷಿಕೇಶಕ್ಕೆ ತೆರಳಿದ್ದರು.
ಓದಿ:ಲೋಕಸಭೆ ಚುನಾವಣೆ: ರಾಜ್ಯದಲ್ಲಿ ಮೊದಲ ಬಾರಿಗೆ ಹೆಚ್ಚು ಮಹಿಳೆಯರಿಗೆ ಮಣೆ; ಕಾಂಗ್ರೆಸ್ನಿಂದ 6, ಬಿಜೆಪಿಯಿಂದ ಇಬ್ಬರಿಗೆ ಟಿಕೆಟ್ - women candidates