ದುಬೈ:ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಭಾನುವಾರ ತುರ್ತು ಮತ್ತು ಅತಿ ವೇಗದಲ್ಲಿ ಭೂಸ್ಪರ್ಶ ಕಂಡಿದೆ. ಇದರಿಂದ ಅಪಘಾತವಾಗಿರುವ ಸಾಧ್ಯತೆ ಇದೆ ಎಂದು ಅಲ್ಲಿನ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ರೈಸಿ ಅವರು ಪೂರ್ವ ಅಜರ್‌ಬೈಜಾನ್ ಪ್ರಾಂತ್ಯಕ್ಕೆ ತೆರಳುತ್ತಿದ್ದರು. ಅಜರ್‌ಬೈಜಾನ್ ಗಡಿಯ ಜೋಲ್ಫಾ ನಗರದ ಅರಣ್ಯ ಪ್ರದೇಶದಲ್ಲಿ ಹೆಲಿಕಾಪ್ಟರ್ ವೇಗವಾಗಿ ದಿಢೀರ್ ಭೂಸ್ಪರ್ಶವಾಗಿದೆ ಎಂದು ತಿಳಿದು ಬಂದಿದೆ. ರಕ್ಷಣಾ ಪಡೆಗಳು ಘಟನಾ ಸ್ಥಳಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಕಾರ್ಯಾಚರಣೆ ಮಳೆ ಅಡ್ಡಿ:ಅಧ್ಯಕ್ಷರಿದ್ದ ಹೆಲಿಕಾಪ್ಟರ್ ಬಿದ್ದಿರುವ ಸ್ಥಳಕ್ಕೆ ತೆರಳಲು ರಕ್ಷಣಾ ಪಡೆಗಳು ಮುಂದಾಗಿದ್ದರೂ, ಭಾರೀ ಮಳೆ ಮತ್ತು ಹವಾಮಾನ ವೈಪರೀತ್ಯ ಅಡಚಣೆ ಉಂಟಾಗಿದೆ. ಭಾರೀ ಗಾಳಿ ಸಹಿತ ಮಳೆಯಾಗುತ್ತಿದ್ದು, ಅರಣ್ಯ ಪ್ರದೇಶಕ್ಕೆ ಹೆಲಿಕಾಪ್ಟರ್ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.
ಇಬ್ರಾಹಿಂ ರೈಸಿ ಅವರು ಅಜರ್ಬೈಜಾನ್ನ ಪ್ರಾಂತ್ಯದ ಗವರ್ನರ್ ಇಲ್ಹಾಮ್ ಅಲಿಯೆವ್ ಅವರೊಂದಿಗೆ ನೂತನ ಅಣೆಕಟ್ಟು ಉದ್ಘಾಟಿಸಲು ಭಾನುವಾರ ಅಲ್ಲಿಗೆ ತೆರಳುತ್ತಿದ್ದರು. ಇದು ಎರಡು ರಾಷ್ಟ್ರಗಳ ನಡುವಿನ ಅರಾಸ್ ನದಿಗೆ ನಿರ್ಮಿಸಿದ ಮೂರನೇ ಅಣೆಕಟ್ಟಾಗಿದೆ. ಅಧ್ಯಕ್ಷರ ಜೊತೆಗೆ ಇರಾನ್ನ ವಿದೇಶಾಂಗ ವ್ಯವಹಾರಗಳ ಸಚಿವ ಹೊಸೈನಿ ಅಮಿರಬ್ದೊಲ್ಲಾಹಿಯನ್, ಅಜರ್ಬೈಜಾನ್ನ ಪ್ರಾಂತ್ಯದ ಗವರ್ನರ್ ಮತ್ತಿತರ ಅಧಿಕಾರಿಗಳು ಇದ್ದರು ಎಂದು ಮಾಹಿತಿ ಇದೆ.
ಅಪಘಾತವಾಗಿರುವ ಸಾಧ್ಯತೆ:ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಈವರೆಗೂ ಹೆಲಿಕಾಪ್ಟರ್ ಮತ್ತು ಅಧ್ಯಕ್ಷರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಕಠಿಣ ನಿಲುವಿನ 63 ವರ್ಷದ ರೈಸಿ ಅವರು, ಈ ಮೊದಲು ದೇಶದ ನ್ಯಾಯಾಂಗದ ಮುಖ್ಯಸ್ಥರಾಗಿದ್ದರು. ಇರಾನ್ನ ಪರಮೋಚ್ಛ ನಾಯಕ ಅಯಾತ್ ಉಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿ ಎಂದೇ ಇವರನ್ನು ಗುರುತಿಸಲಾಗುತ್ತಿದೆ. 1988 ರಲ್ಲಿ ಸಾವಿರಾರು ರಾಜಕೀಯ ಕೈದಿಗಳ ಮರಣದಂಡನೆ ಹಿನ್ನೆಲೆಯಲ್ಲಿ ಅಮೆರಿಕ ಇವರ ಮೇಲೆ ನಿರ್ಬಂಧ ಹೇರಿತ್ತು.
ಇದನ್ನೂ ಓದಿ:ಸ್ಲೋವಾಕಿಯಾ ಪ್ರಧಾನಿ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರು: ಉಪಪ್ರಧಾನಿ ಕಲಿನಾಕ್ ಹೇಳಿಕೆ - Attack on Slovakian PM