ಶಿಮ್ಲಾ(ಹಿಮಾಚಲ ಪ್ರದೇಶ):ಕಳೆದ ವರ್ಷ ತೀವ್ರ ಮಳೆ ಕೊರತೆ ಕಂಡಿದ್ದ ಹಿಮಚ್ಚಾದಿತ ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಇದೀಗ ಭಾರೀ ಹಿಮಪಾತವಾಗುತ್ತಿದೆ. ಹಲವೆಡೆ ಮಳೆಯೂ ಸುರಿಯುತ್ತಿದೆ. ಇದು ರೈತರಿಗೆ ಸಂತಸ ತಂದರೆ, ಸಹಜ ಜೀವನಕ್ಕೆ ಅಡ್ಡಿಯುಂಟಾಗಿದೆ. ರಸ್ತೆಗಳ ಮೇಲೆ 15 ಸೆಂಟಿ ಮೀಟರ್ನಷ್ಟು ಹಿಮ ಶೇಖರಣೆಯಾಗಿದೆ. 4 ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 134 ರಸ್ತೆಗಳು ಬಂದ್ ಆಗಿವೆ.
ಜನವರಿ 30ರಿಂದ ರಾಜ್ಯದ ಹಲವೆಡೆ ಹಿಮಪಾತವಾಗುತ್ತಿದೆ. ಇನ್ನೂ ಎರಡು ದಿನ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಶಿಮ್ಲಾ, ಛಂಬಾ, ಕಿನ್ನೌರ್ ಲಾಹೌಲ್, ಸ್ಪಿತಿಯಲ್ಲಿ ಭಾರೀ ಹಿಮ ಮತ್ತು ಮಳೆಯಾಗಲಿದ್ದು, ಸ್ಥಳೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಇದು ಈ ವರ್ಷದ ಮೊದಲ ಹಿಮಪಾತವಾಗಿದೆ. ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲೊಂದರಲ್ಲೇ ಗರಿಷ್ಠ 120 ರಸ್ತೆಗಳಲ್ಲಿ ಸಂಚಾರ ಬಂದ್ ಆಗಿವೆ.
ಕಂಡ ಕಂಡಲ್ಲಿ ಹಿಮದ ರಾಶಿ:ಹಿಮಪಾತದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಶಿಮ್ಲಾ ಜಿಲ್ಲೆಯ ಎತ್ತರದ ಪ್ರದೇಶಗಳಲ್ಲಿ ಸುಮಾರು 15 ಸೆಂ.ಮೀನಷ್ಟು ಹಿಮ ರಾಶಿ ಕಟ್ಟಿಕೊಂಡಿದೆ. ಲಾಹೌಲ್ ಮತ್ತು ಸ್ಪಿತಿಯಲ್ಲಿ 26 ಸೆಂ.ಮೀ., ಕೋಠಿ 15 ಸೆಂ.ಮೀ., ಸುಮ್ಧೋ 14.8 ಸೆಂ.ಮೀ., ಕುಮುಮ್ಸೇರಿ 14.2 ಸೆಂ.ಮೀ. ಖದ್ರಾಲಾದಲ್ಲಿ 14 ಸೆಂ.ಮೀ., ಭರ್ಮೌರ್ 8.6 ಸೆಂ.ಮೀ., ಕೀಲಾಂಗ್ 8 ಸೆಂ.ಮೀ., ಮನಾಲಿ, ಸಾಂಗ್ಲಾ ಮತ್ತು ಶಿಲಾರೂದಲ್ಲಿ ತಲಾ 5 ಸೆಂ.ಮೀ, ಮತ್ತು ಕೊಕ್ಸರ್ 2.5 ಸೆಂ.ಮೀನಷ್ಟು ಹಿಮ ಬಿದ್ದಿದೆ.