ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕೆ ಸರ್ಕಾರ ಜಾಗವನ್ನು ಮಂಜೂರು ಮಾಡಲಿದ್ದು, ಇದನ್ನು ಅವರ ಕುಟುಂಬ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ರಾತ್ರಿ ಸ್ಪಷ್ಟನೆ ನೀಡಿದೆ.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಸ್ಮಾರಕಕ್ಕೆ ಸಂಬಂಧಿಸಿದ ಸಂಗತಿಗಳು ಎಂಬ ಶೀರ್ಷಿಕೆಯಡಿ ತಡರಾತ್ರಿ ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಸಚಿವಾಲಯವು, ಕಾಂಗ್ರೆಸ್ ಮುಖ್ಯಸ್ಥರಿಂದ ಸಿಂಗ್ ಅವರ ಸ್ಮಾರಕಕ್ಕಾಗಿ ಜಾಗವನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಬಂದಿರುವ ಮನವಿಯನ್ನು ಸ್ವೀಕರಿಸಿದೆ ಎಂದು ಹೇಳಿದೆ.
ಕ್ಯಾಬಿನೆಟ್ ಸಭೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಖರ್ಗೆ ಮತ್ತು ಮನಮೋಹನ್ ಸಿಂಗ್ ಅವರ ಕುಟುಂಬಕ್ಕೆ ಸರ್ಕಾರವು ಸ್ಮಾರಕ ನಿರ್ಮಾಣಕ್ಕಾಗಿ ಜಾಗವನ್ನು ಮಂಜೂರು ಮಾಡಲಿದೆ ಎಂದು ತಿಳಿಸಿದ್ದಾರೆ. ಅಂತ್ಯ ಸಂಸ್ಕಾರ ಮತ್ತು ಇತರ ವಿಧಿವಿಧಾನಗಳ ಹಿನ್ನೆಲೆಯಲ್ಲಿ ಟ್ರಸ್ಟ್ ರಚಿಸಬೇಕಾಗಿದೆ ಮತ್ತು ಅದಕ್ಕೆ ಸ್ಥಳವನ್ನು ನಿಗದಿಪಡಿಸಬೇಕಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಗುರುವಾರ ನಿಧನರಾಗಿರುವ ಮನಮೋಹನ್ ಸಿಂಗ್: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ನೇತೃತ್ವ ವಹಿಸಿ, ಆರ್ಥಿಕ ಸುಧಾರಣೆಗಳ ಹರಿಕಾರ ಎಂದು ಗುರುತಿಸಿಕೊಂಡಿರುವ ಸಿಂಗ್ ಅವರು ಗುರುವಾರ 92 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 2004 ರಿಂದ 2014ರ ವರೆಗೆ 10 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಡಾ. ಮನಮೋಹನ್ ಸಿಂಗ್ ಅವರು ಗಣನೀಯ ಸೇವೆ ಸಲ್ಲಿಸಿದ್ದರು. ಅದಕ್ಕೂ ಪೂರ್ವದಲ್ಲಿ ಪಿ ವಿ ನರಸಿಂಹರಾವ್ ಅವರ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ಭಾರತದ ಆರ್ಥಿಕ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದರು.
ದೇಶದಲ್ಲಿ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ನೀತಿ ಜಾರಿಗೆ ತಂದಿದ್ದರು. ಈ ಮೂಲಕ ಉದ್ಯೋಗಾವಕಾಶ, ಕೈಗಾರಿಕೀಕರಣ ಹಾಗೂ ಉದ್ಯಮಗಳ ಸ್ಥಾಪನೆಗೆ ಅನುವು ಮಾಡಿಕೊಟ್ಟಿದ್ದ ಅವರು, ದೇಶದ ಅಭ್ಯುದಯಕ್ಕೆ 1991ರಲ್ಲೇ ಭದ್ರ ಅಡಿಪಾಯ ಹಾಕಿದ್ದರು. ಈ ಮೂಲಕ ಇಂದು ಭಾರತ ವಿಶ್ವದ ಐದನೇ ಆರ್ಥಿಕ ಶಕ್ತಿಯಾಗಿ ತಲೆ ಎತ್ತಲು ಸಾಧ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಮನಮೋಹನ್ ಸಿಂಗ್ ಭಾರತದ ಬೆಳವಣಿಗೆಯಲ್ಲಿ ತಮ್ಮದೇ ಭೂಮಿಕೆಯನ್ನು ನಿರ್ವಹಿಸಿದ್ದಾರೆ. 92 ವರ್ಷಗಳ ತುಂಬು ಜೀವನ ನಡೆಸಿ ಇಹಲೋಕ ತ್ಯಜಿಸಿದ್ದಾರೆ.
ಕೇಂದ್ರದ ವಿರುದ್ಧ ಕಾಂಗ್ರೆಸ್ ಅಸಮಾಧಾನ: ಸಿಂಗ್ ಅವರ ಅಂತ್ಯಕ್ರಿಯೆ ಮತ್ತು ಸ್ಮಾರಕಕ್ಕೆ ಸ್ಥಳವನ್ನು ಗುರುತಿಸದೇ ಇರುವುದು ದೇಶದ ಮೊದಲ ಸಿಖ್ ಪ್ರಧಾನಿಗೆ ಮಾಡಿದ ಉದ್ದೇಶಪೂರ್ವಕ ಅವಮಾನವಾಗಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
ಸಿಂಗ್ ಅವರ ಅಂತಿಮ ಸಂಸ್ಕಾರ ನವದೆಹಲಿಯ ನಿಗಮಬೋಧ್ ಘಾಟ್‌ನಲ್ಲಿ ಶನಿವಾರ ಬೆಳಗ್ಗೆ 11.45 ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಗೃಹ ಸಚಿವಾಲಯ ಹೇಳಿದ ನಂತರ ಪಕ್ಷವು ಈ ವಿಷಯವನ್ನು ಪ್ರಸ್ತಾಪಿಸಿದೆ.