ಹೈದರಾಬಾದ್: ಭಾರೀ ಮಳೆ ಮತ್ತು ನೀರಿನ ಭಾರೀ ಒಳಹರಿವಿನಿಂದಾಗಿ ಹೈದರಾಬಾದ್ ನ ಹೃದಯಭಾಗದಲ್ಲಿರುವ ಹುಸೇನ್ ಸಾಗರ್ ಸರೋವರ ಸಂಪೂರ್ಣ ಭರ್ತಿಯಾಗಿದ್ದು, ಅಧಿಕಾರಿಗಳು ಭಾನುವಾರ ನಾಲ್ಕು ಸ್ಲೂಯಿಸ್ ಗೇಟ್ ಗಳನ್ನು ತೆರೆದು ನೀರನ್ನು ಬಿಡುಗಡೆ ಮಾಡಿದ್ದಾರೆ. ಸರೋವರದಿಂದ ನೀರು ಹೊರ ಹೋಗುವ ಕಾಲುವೆಗಳ ಪಾತ್ರದಲ್ಲಿ ವಾಸಿಸುವ ಜನತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಸೂಚಿಸಿದೆ.
ಶನಿವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೈದರಾಬಾದ್ ಮತ್ತು ಸಿಕಂದರಾಬಾದ್ ಅವಳಿ ನಗರಗಳ ವಿವಿಧ ಭಾಗಗಳಿಂದ ಭಾರಿ ಪ್ರಮಾಣದ ಮಳೆನೀರು ಚರಂಡಿಗಳ ಮೂಲಕ ಹುಸೇನ್ ಸಾಗರ್ ಗೆ ಹರಿದು ಬಂದಿದೆ. ಜಲಾಶಯದ ಗರಿಷ್ಠ ಮಟ್ಟ 514 ಮೀಟರ್ ಇದ್ದು, ಇಂದಿನ ನೀರಿನ ಮಟ್ಟ 513.60 ಮೀಟರ್ ಇದೆ. ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಮುಂದುವರೆದಿದ್ದು, ಜಿಎಚ್ ಎಂಸಿ ಅಧಿಕಾರಿಗಳು ನೀರಿನ ಮಟ್ಟವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಮುಂದಿನ 24 ಗಂಟೆಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಜಿಎಚ್ ಎಂಸಿ ಈಗಾಗಲೇ ಅಲರ್ಟ್ ಹೊರಡಿಸಿದೆ ಎಂದು ಉಪ ಮೇಯರ್ ಶ್ರೀ ಲತಾ ಹೇಳಿದರು. ಮಳೆಯಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ವಿವಿಧ ವಿಭಾಗಗಳಿಗೆ ನಿರ್ದೇಶಿಸಲಾಗಿದೆ.