ಜೈಪುರ: ರಾಜಸ್ಥಾನದಲ್ಲಿನ ಭಾರೀ ಮಳೆಗೆ ಕಳೆದ 24 ಗಂಟೆಗಳಲ್ಲಿ ವಿವಿಧ ದುರ್ಘಟನೆಗಳಲ್ಲಿ 20 ಜನ ಸಾವನ್ನಪ್ಪಿದ್ದಾರೆ. ಜೈಪುರ, ಕರೌಲಿ, ಸವಾಯಿ ಮದೊಪುರ್ ಮತ್ತು ದೌಸಾದಲ್ಲಿ ಭಾರೀ ಮಳೆಯಾಗಿದ್ದು, ರಸ್ತೆಗಳು ಜಲಾವೃತ್ತವಾಗಿದೆ. ಇದರಿಂದಾಗಿ ಮಳೆಪೀಡಿತ ಪ್ರದೇಶಗಳಲ್ಲಿ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತಗಳು ಆದೇಶಿಸಿದೆ.
ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಪೂರ್ವ ರಾಜಸ್ಥಾನದ ಕೆಲವು ಸ್ಥಳಗಳಲ್ಲಿ ಭಾರಿ ಮಳೆ ಆಗಲಿದ್ದು, ಜೈಪುರ, ಭರತ್‌ಪುರ, ಅಜ್ಮೀರ್ ಮತ್ತು ಕೋಟಾ ವಿಭಾಗಗಳ ಹಲವಾರು ಭಾಗಗಳಲ್ಲಿ ಮುಂದಿನ ಐದರಿಂದ ಆರು ದಿನಗಳವರೆಗೆ ಮಾನ್ಸೂನ್ ಸಕ್ರಿಯವಾಗಿರಲಿದೆ. ಈ ಅವಧಿಯಲ್ಲಿ ರಾಜ್ಯದ ಹಲವೆಡೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆ ಪ್ರಕಾರ, ಜೈಪುರದಲ್ಲಿ ಭಾನುವಾರ ಬೆಳಗ್ಗೆ 8.30ರಿಂದ ಸಂಜೆ 5.30ರ ವರೆಗೆ 63.2 ಮಿ.ಮೀ ಮಳೆಯಾಗಿದೆ. ಕರೌಲಿಯಲ್ಲಿ 31.5 ಮಿ.ಮೀ, ಅಲ್ವಾರ್‌ನಲ್ಲಿ 14.2 ಮಿ.ಮೀ, ಮೌಂಟ್ ಅಬು ಮತ್ತು ಸಿಕರ್‌ನಲ್ಲಿ ತಲಾ 9 ಮಿಲಿ ಮೀಟರ್, ಫತೇಪುರ್‌ನಲ್ಲಿ 6.5 ಮಿ.ಮೀ ಮಳೆ ದಾಖಲಾಗಿದೆ.
ಜೈಪುರದ ಕನೋಟಾ ಅಣೆಕಟ್ಟು ವೀಕ್ಷಣೆಗೆ ಬಂದಿದ್ದ ಐವರು ಯುವಕರು ಮುಳುಗಿ ಸಾವನ್ನಪ್ಪಿದ್ದಾರೆ. ಅಣೆಕಟ್ಟಿನಲ್ಲಿ ಸ್ನಾನಕ್ಕೆ ಇಳಿದ ಆರು ಮಂದಿಯಲ್ಲಿ ಒಬ್ಬ ಪ್ರಾಣ ಉಳಿಸಿಕೊಂಡಿದ್ದು, ಉಳಿದ ಐವರು ಮುಳಗಿ ಸಾವನ್ನಪ್ಪಿದ್ದಾರೆ. ತಡರಾತ್ರಿವರೆಗೆ ಅವರ ದೇಹಕ್ಕೆ ಶೋಧ ನಡೆಸಲಾಯಿತು ಎಂದು ಅಧಿಕಾರಿಗಳು ಈಟಿವಿ ಭಾರತ್ಗೆ ತಿಳಿಸಿದ್ದಾರೆ.