ದೆಹಲಿಯ ಸುರಿದ ಧಾರಾಕಾರ ಮಳೆ (ETV Bharat) ನವದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಯಿಂದ ಜನಜೀವನಅಸ್ತವ್ಯಸ್ತಗೊಂಡಿದೆ. ಹಠಾತ್ ಸುರಿದ ಮಳೆಯಿಂದ ರಾಷ್ಟ್ರ ರಾಜಧಾನಿಯ ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ಗಾಜಿಪುರ ಪ್ರದೇಶದಲ್ಲಿ ಮಹಿಳೆ ಮತ್ತು ಆಕೆಯ ಮಗು ನೀರಿನಿಂದ ತುಂಬಿರುವ ಚರಂಡಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ತನುಜಾ ಮತ್ತು ಅವರ ಮೂರು ವರ್ಷದ ಮಗ ಪ್ರಿಯಾಂಶ್ ಎಂದು ಗುರುತಿಸಲಾಗಿದೆ.
ದೆಹಲಿಯ ಸುರಿದ ಧಾರಾಕಾರ ಮಳೆ (ETV Bharat) ತಾಯಿ-ಮಗು ಸಾವು:ತನುಜಾ ಬುಧವಾರ ಸಂಜೆ ತನ್ನ ಮೂರು ವರ್ಷದ ಮಗನೊಂದಿಗೆ ಮಾರುಕಟ್ಟೆಗೆ ಹೋಗುತ್ತಿದ್ದರು. ನೀರು ನಿಂತಿದ್ದರಿಂದ ನಿರ್ಮಾಣ ಹಂತದಲ್ಲಿರುವ ಚರಂಡಿ ಗುರುತು ಸಿಗದ ಕಾರಣ ಇಬ್ಬರೂ ನಾಲೆಯಲ್ಲಿ ಬಿದ್ದಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ನೀರಿನ ಹರಿವು ವೇಗವಾಗಿದ್ದರಿಂದ ಕೊಚ್ಚಿಕೊಂಡು ಹೋಗಿ ರಾತ್ರಿ 8 ವೇಳೆ ಪತ್ತೆಯಾಗಿದ್ದಾರೆ. ಕ್ರೇನ್‌ಗಳ ಸಹಾಯದಿಂದ ಹಲವು ಗಂಟೆಗಳ ಪರಿಶ್ರಮದ ನಂತರ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಯಿತು. ತಕ್ಷಣ ಅವರನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಅವರ ಸಾವು ಖಚಿತಪಡಿಸಿದರು. ಸದ್ಯ ಮೃತದೇಹಗಳನ್ನು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪತ್ನಿ ಮತ್ತು ಮಗು ಕಳೆದುಕೊಂಡ ಪತಿಯ ಆಕ್ರಂದನ ಮುಗಿಲು ಮುಟ್ಟಿದೆ.
ಮತ್ತೆ ಪ್ರವಾಹದಲ್ಲಿ ಹಳೆ ರಾಜಿಂದರ್ ನಗರ (ETV Bharat) ಪತಿ ಗೋವಿಂದ್ ಆರೋಪ:ನನ್ನ ಪತ್ನಿ ಮತ್ತು ಮಗನ ಸಾವಿಗೆ ಸರ್ಕಾರವೇ ಕಾರಣ ಎಂದು ಪತಿ ಗೋವಿಂದ್ ಆರೋಪ ಮಾಡಿದ್ದಾನೆ. ಸುದ್ದಿ ತಿಳಿದು ಸ್ಥಳೀಯ ಶಾಸಕ ಕುಲದೀಪ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಘಟನೆಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ)ದ ಅಧಿಕಾರಿಗಳೇ ಹೊರಬೇಕು. ಚರಂಡಿಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳನ್ನು ಮುಚ್ಚಿಲ್ಲ. ಅಲ್ಲದೇ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗೋಡೆ ಕುಸಿದು ಮಹಿಳೆ ಗಾಯ: ಇನ್ನು ಮಳೆ ಸಂಬಂಧಿದ ಇತರ ದುರ್ಘಟನೆಗಳಲ್ಲಿ ಇಬ್ಬರು ಗಾಯಗೊಂಡಿದ್ದು, ಉತ್ತರ ದೆಹಲಿಯ ಸಬ್ಜಿ ಮಂಡಿ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ಮನೆ ಕುಸಿದು ಒಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರನೇ ಘಟನೆಯಲ್ಲಿ, ನೈಋತ್ಯ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ಗೋಡೆ ಕುಸಿದು ಮಹಿಳೆ ಗಾಯಗೊಂಡಿದ್ದಾರೆ. ಇದೇ ರೀತಿಯ ಹಲವು ಸಣ್ಣ-ಪುಟ್ಟ ಅವಾಂತರಗಳು ವರದಿಯಾಗಿವೆ.
ಶಾಲೆಗಳಿಗೆ ರಜೆ: ಭಾರಿ ಮಳೆಯಿಂದಾಗಿ ನಗರದ ಎಲ್ಲ ಶಾಲೆಗಳಿಗೆ ಗುರುವಾರ ರಜೆ ಘೋಷಿಸಿ ದೆಹಲಿಯ ಶಿಕ್ಷಣ ಸಚಿವೆ ಅತಿಶಿ ಆದೇಶ ನೀಡಿದ್ದಾರೆ. ಭಾರೀ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ, ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಆಗಸ್ಟ್ 1 ರಂದು ರಜೆ ಘೋಷಿಸಲಾಗಿದೆ ಎಂದು ಅವರು 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಏರ್ ಟ್ರಾಫಿಕ್ ಹಿಟ್: ರಾಷ್ಟ್ರ ರಾಜಧಾನಿಯ ಮಳೆಯಿಂದಾಗಿ ವಿಮಾನ ಸಂಚಾರ ಕೂಡ ಸ್ಥಗಿತವಾಗಿದೆ. ರಸ್ತೆಯಲ್ಲಿ ನೀರು ನಿಂತಿದ್ದು, ಜನ ಓಡಾಟಕ್ಕೆ ಕಷ್ಟಪಡುವಂತಾಗಿದೆ. ಹಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಪ್ರತಿಕೂಲ ಹವಾಮಾನದಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 10 ವಿಮಾನಗಳಲ್ಲಿ ಎಂಟು ಜೈಪುರಕ್ಕೆ ಮತ್ತು ಎರಡು ಲಕ್ನೋಗೆ ಮಾರ್ಗ ಬದಲಿಸಲಾಗಿದೆ. ವಿಮಾನಯಾನ ಸಂಸ್ಥೆಗಳು ಇನ್ನಷ್ಟು ವಿಮಾನ ಹಾರಾಟದಲ್ಲಿ ವ್ಯತ್ಯಯವಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿವೆ.
ವ್ಯಾಪಕ ಮಳೆ: ಭಾರತದ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದ ಪ್ರಕಾರ, ನಗರದ ಪ್ರಾಥಮಿಕ ಹವಾಮಾನ ಕೇಂದ್ರ ಸಫ್ದರ್‌ಜಂಗ್‌ನಲ್ಲಿ ಬುಧವಾರ ಸಂಜೆ 5:30 ರಿಂದ 8:30 ರ ನಡುವೆ 79.2 ಮಿ.ಮೀ ಮಳೆಯಾದರೆ, ಮಯೂರ್ ವಿಹಾರ್ನಲ್ಲಿ 119 ಮಿ.ಮೀ, ದೆಹಲಿ ವಿಶ್ವವಿದ್ಯಾಲಯದಲ್ಲಿ 77.5 ಮಿ.ಮೀ, ಪೂಸಾದಲ್ಲಿ 66.5 ಮಿ.ಮೀ ಮತ್ತು ಪಾಲಂ ವೀಕ್ಷಣಾಲಯದಲ್ಲಿ 43.7 ಮಿ.ಮೀ. ಮಳೆ ಸುರಿದಿದೆ. ಇದು ಈ ಋತುವಿನಲ್ಲಿ ಸುರಿದ ಅಧಿಕ ಮಳೆಯಾಗಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಅಲರ್ಟ್ ಆಗಿರಲು ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವ್ಯಾಪಕ ಮಳೆ ನಿರೀಕ್ಷೆ:ಹಲವು ಕಡೆ ರಸ್ತೆಗಳಲ್ಲಿ ನೀರು ನಿಂತಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಲುಟಿಯನ್ಸ್ ದೆಹಲಿ ಮತ್ತು ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್ ಮತ್ತು ಫರಿದಾಬಾದ್‌ಗೆ ತೆರಳುವ ರಸ್ತೆಗಳು ಅಸ್ತವ್ಯಸ್ತಗೊಂಡಿವೆ. ಮುಂದಿನ 24 ಗಂಟೆಗಳಲ್ಲಿ ವ್ಯಾಪಕ ಮಳೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಜನತೆ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಂಡು ಮನೆಯಲ್ಲೇ ಇರುವಂತೆ ಹವಾಮಾನ ಇಲಾಖೆ ಸಲಹೆ ಮಾಡಿದೆ. ಅನಗತ್ಯ ಪ್ರಯಾಣವನ್ನು ಮಾಡದಂತೆಯೂ ಸೂಚಿಸಲಾಗಿದೆ.
ಮತ್ತೆ ಪ್ರವಾಹದಲ್ಲಿ ಹಳೆ ರಾಜಿಂದರ್ ನಗರ: ಕೋಚಿಂಗ್ ಸೆಂಟರ್ ನೆಲಮಾಳಿಗೆಯಲ್ಲಿ ಪ್ರವಾಹದಿಂದಾಗಿ ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳು ಮೃತಪಟ್ಟಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದ ಹಳೆ ರಾಜಿಂದರ್ ನಗರ ಮತ್ತೆ ನೀರಿನಲ್ಲಿ ಮುಳುಗಿದೆ. ಕನ್ನಾಟ್ ಪ್ಲೇಸ್‌ನಲ್ಲಿ, ಅನೇಕ ಶೋರೂಮ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ನೀರು ನುಗ್ಗಿದೆ. ಮೂಲ್‌ಚಂದ್‌ನಿಂದ ಚಿರಾಗ್ ದೆಹಲಿ ಕಡೆಗೆ ಸಾಗುವ ಮಾರ್ಗದಲ್ಲಿ, ಅನುವ್ರತ್ ಮಾರ್ಗ, ಔಟರ್ ರಿಂಗ್ ರೋಡ್, ಶ್ಯಾಮ ಪ್ರಸಾದ್ ಮುಖರ್ಜಿ ಮಾರ್ಗ ಮತ್ತು ಮಹಾತ್ಮ ಗಾಂಧಿ ಮಾರ್ಗದ ಇತರ ಪ್ರಮುಖ ರಸ್ತೆಗಳ ಎರಡೂ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ. ಕಾಶ್ಮೀರ್ ಗೇಟ್, ಕರೋಲ್ ಬಾಗ್, ಪ್ರಗತಿ ಮೈದಾನ, ಮುನ್ಸಿಪಲ್ ಕಾರ್ಪೊರೇಷನ್ ಸೇರಿದಂತೆ ದೆಹಲಿಯ ಹಲವು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಈ ಬಗ್ಗೆ ನಾಲ್ಕು ದೂರು ಮತ್ತು ಮರ ಬಿದ್ದ ಬಗ್ಗೆ ಮೂರು ಕರೆಗಳು ಬಂದಿವೆ. ನಗರದಾದ್ಯಂತ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ.
ಸಂಚಾರ ದಟ್ಟಣೆ:ಹಳೇ ದೆಹಲಿಯ ದರಿಯಾಗಂಜ್ ಪ್ರದೇಶದಲ್ಲಿ ಶಾಲೆಯೊಂದರ ಗಡಿ ಗೋಡೆಯು ಹೊರಗೆ ನಿಲ್ಲಿಸಿದ್ದ ಕಾರುಗಳ ಮೇಲೆ ಕುಸಿದು ಬಿದ್ದಿದ್ದು, ರಸ್ತೆಯ ಕೆಳಭಾಗದಲ್ಲಿ ಕಂದಕ ನಿರ್ಮಾಣವಾಗಿದೆ. ಪ್ರಗತಿ ಮೈದಾನದ ಸುರಂಗ ಮಾರ್ಗದಲ್ಲೂ ನೀರು ನಿಂತಿದ್ದರಿಂದ ಅವ್ಯವಸ್ಥೆ ಉಂಟಾಗಿದೆ. ಐಟಿಒ ಛೇದಕ, ಧೌಲಾ ಕುವಾನ್ ಪ್ರದೇಶ ಮತ್ತು ವಿಮಾನ ನಿಲ್ದಾಣದ ಕಡೆಗೆ ಸಾಗುವ ರಸ್ತೆಗಳು ಜಲಾವೃತವಾಗಿದ್ದರಿಂದ ಸಂಚಾರ ದಟ್ಟಣೆ ಅಧಿಕವಾಗಿತ್ತು. ಪ್ರೆಸ್ ಕ್ಲಬ್ ಆಫ್ ಇಂಡಿಯಾಕ್ಕೂ ಮಳೆನೀರು ನುಗ್ಗಿದ್ದು, ಅಲ್ಲಿ ಜನರು ಮೊಣಕಾಲು ಆಳದ ನೀರಿನಲ್ಲಿ ಕುಳಿತಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ. ಸುರಿದ ಮಳೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಂಟಾಗಿರುವ ಜಲಾವೃತ ಸಮಸ್ಯೆಗಳಿಗೆ ಎಎಪಿ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ಬಿಜೆಪಿ ಆರೋಪಿಸಿದರೆ, ಸರ್ಕಾರ ನಿಗಾ ವಹಿಸುತ್ತಿದೆ ಎಂದು ಅತಿಶಿ ಹೇಳಿದ್ದಾರೆ.
"ಕಳೆದ ಎರಡು ಗಂಟೆಗಳಲ್ಲಿ ದೆಹಲಿಯಲ್ಲಿ ಭಾರೀ ಮಳೆಯಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ದೆಹಲಿ ಸರ್ಕಾರ ಮತ್ತು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ತಗ್ಗು ಪ್ರದೇಶಗಳು ಮತ್ತು ಜಲಾವೃತ ಸ್ಥಳಗಳ ಮೇಲೆ ನಿಗಾ ವಹಿಸುತ್ತಿದೆ" ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಆಗಸ್ಟ್ 5ರವರೆಗೂ ಮಳೆ:ಬುಧವಾರದಂದು ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ 30.29 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಗರಿಷ್ಠ ತಾಪಮಾನ 33.42 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆಗಸ್ಟ್ 5ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಇದನ್ನೂ ಓದಿ:ಹಿಮಾಚಲದಲ್ಲೂ ಭಾರಿ ಮೇಘಸ್ಫೋಟ: ಮೂವರು ಬಲಿ, 40 ಮಂದಿ ಕಣ್ಮರೆ.. ಮುಂದುವರಿದ ಕಾರ್ಯಾಚರಣೆ - Cloudburst in Himachal Pradesh