ನವದೆಹಲಿ:ಉರಿ ಬಿಸಿಲು ನೆತ್ತಿ ಸುಡುವುದರ ಜೊತೆಗೆ ಪ್ರಾಣಾಂತಕವಾಗಿಯೂ ಪರಿಣಮಿಸುತ್ತಿದೆ. ಬಿಸಿಲು ಮತ್ತು ಝಳದಿಂದ ತಪ್ಪಿಸಿಕೊಳ್ಳಲು ಜನರು ನಾನಾ ಕಸರತ್ತು ಮಾಡುತ್ತಿದ್ದಾರೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮತ್ತೊಂದು ಎಚ್ಚರಿಕೆ ಸಂದೇಶ ರವಾನಿಸಿದೆ.
ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಬಿಹಾರ, ತೆಲಂಗಾಣದ ಹಲವು ಭಾಗಗಳಲ್ಲಿ ಇನ್ನೈದು ದಿನ (ಏಪ್ರಿಲ್ 29) ತೀವ್ರ ಬಿಸಿಗಾಳಿ ಬೀಸಲಿದೆ ಎಂದು ತಿಳಿಸಿದೆ. ಇದರಿಂದ ತಪ್ಪಿಸಿಕೊಳ್ಳಲು ಜನರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದೆ.
ಎಲ್ಲೆಲ್ಲಿ ಸೂರ್ಯನ ಪ್ರತಾಪ?:ಬಿಹಾರ, ಜಾರ್ಖಂಡ್, ಆಂಧ್ರ ಪ್ರದೇಶದ ಕರಾವಳಿ, ಯಾನಂ ಪ್ರದೇಶ, ತೆಲಂಗಾಣ, ರಾಯಲಸೀಮಾ, ಕರ್ನಾಟಕದ ಒಳನಾಡು ಪ್ರದೇಶಗಳು, ಉತ್ತರ ಪ್ರದೇಶದ ಪೂರ್ವ ಭಾಗಗಳು ಮುಂದಿನ 5 ದಿನಗಳಲ್ಲಿ ತೀವ್ರ ಬಿಸಿಗಾಳಿ ಇರಲಿದೆ. ಜೊತೆಗೆ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ 26 ರಿಂದ 29, ಕೊಂಕಣ ಭಾಗದಲ್ಲಿ 27 ರಿಂದ 29 ರವರೆಗೆ ಶಾಖದ ಅಲೆಯ ಪರಿಸ್ಥಿತಿ ಇರಲಿದೆ ಎಂದು ತಿಳಿಸಿದೆ.
ತ್ರಿಪುರಾ, ಕೇರಳ, ಮಾಹೆ, ಕರ್ನಾಟಕದ ಕರಾವಳಿ ಭಾಗ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್, ಅಸ್ಸಾಂ ಮತ್ತು ಮೇಘಾಲಯದಲ್ಲಿ 25 ರಿಂದ 28ರವರೆಗೆ ಬಿಸಿಗಾಳಿ ಬೀಸಲಿದೆ. ಕೊಂಕಣ ಮತ್ತು ಗೋವಾದಲ್ಲಿ ಏಪ್ರಿಲ್ 25 ಮತ್ತು 26 ರಂದು ಬಿಸಿ ಮತ್ತು ಆರ್ದ್ರ ವಾತಾವರಣ ಇರಲಿದೆ ಎಂದು ಹೇಳಿದೆ.
ನಡೆಯುತ್ತಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೇಶದ ಹಲವು ಭಾಗಗಳಲ್ಲಿ ತೀವ್ರವಾದ ಬಿಸಿಗಾಳಿ ಪರಿಸ್ಥಿತಿ ಇರುವ ಕಾರಣ ಕೇಂದ್ರ ಚುನಾವಣಾ ಆಯೋಗವು, ಭಾರತೀಯ ಹವಾಮಾನ ಇಲಾಖೆಯ ಜೊತೆಗೆ ಸಭೆ ನಡೆಸಿದೆ. ದೇಶವು ಬಿಸಿಲಿನ ಬೇಗೆಯಲ್ಲಿ ತತ್ತರಿಸುತ್ತಿದ್ದು, ಏರುತ್ತಿರುವ ತಾಪಮಾನದಿಂದ ಉಂಟಾಗುವ ಸವಾಲುಗಳನ್ನು ಕಡಿಮೆ ಮಾಡಲು ಮತ್ತು ಜನರು ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಬಗ್ಗೆ ಚರ್ಚಿಸಿದೆ.
ಮಳೆಯ ಮುನ್ಸೂಚನೆಗಳು:ಬಿಸಿಗಾಳಿಯ ಮಧ್ಯೆ ಚಂಡಮಾರುತವೂ ಬೀಸುವ ಸಾಧ್ಯತೆ ಇದೆ. ಇದರಿಂದ ವಾತಾವರಣದಲ್ಲಿ ಬದಲಾವಣೆಯಾಗಿ ಜಮ್ಮು-ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್, ಮುಜಫರಾಬಾದ್, ಪಶ್ಚಿಮ ರಾಜಸ್ಥಾನ, ಹಿಮಾಚಲ ಪ್ರದೇಶದ ಭಾಗಗಳಲ್ಲಿ ಏಪ್ರಿಲ್ 26, 27 ರಂದು ಗುಡುಗು ಮತ್ತು ಮಿಂಚು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 26 ರಿಂದ 28 ರ ನಡುವೆ ಉತ್ತರಾಖಂಡದಲ್ಲಿ ಮಳೆ ಸುರಿಯುವ ಮುನ್ಸೂಚನೆಯನ್ನು ಐಎಂಡಿ ನೀಡಿದೆ.
ಅರುಣಾಚಲ ಪ್ರದೇಶದಲ್ಲಿ ಗುಡುಗು, ಮಿಂಚು ಮತ್ತು ಗಂಟೆಗೆ 30 ರಿಂದ 50 ಕಿಮೀ ವೇಗದ ಬಿರುಗಾಳಿಯ ಜೊತೆಗೆ ಸಾಧಾರಣ ಮಳೆ/ಹಿಮಪಾತ ಬೀಳಲಿದೆ. ಏಪ್ರಿಲ್ 25 ರಿಂದ 29ರೊಳಗೆ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಸಾಕಷ್ಟು ಮಳೆಯಾಗಲಿದೆ ಎಂದೂ ತಿಳಿಸಿದೆ.
ಇದನ್ನೂ ಓದಿ:ತೆಲಂಗಾಣದಲ್ಲಿ ತಾಪಮಾನ ಏರಿಕೆ, ಸನ್‌ಸ್ಟ್ರೋಕ್‌ಗೆ ಮೂವರು ಸಾವು - Temperature Rises In Telangana