ಹೈದರಾಬಾದ್ (ತೆಲಂಗಾಣ): ರಾಜ್ಯ ಶಾಖದ ಅಲೆಗೆ ತತ್ತರಿಸಿದ್ದು, ದಿನ ಕಳೆದಂತೆ ಸೂರ್ಯನ ಪ್ರತಾಪ ಹೆಚ್ಚುತ್ತಿದ್ದು, ಕಳೆದ 10 ವರ್ಷದಲ್ಲೇ ಇದು ಅತ್ಯಧಿಕ ತಾಪಮಾನವೆಂದು ದಾಖಲಾಗಿದೆ. ತೆಲಂಗಾಣ 10 ಜಿಲ್ಲೆಗಳ 20 ತಾಲೂಕುಗಳಲ್ಲಿ 46ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ನಲ್ಗೊಂಡ ಜಿಲ್ಲೆಯ ಮುನುಗೋಡು ಮಂಡಲದ ಗುಡಪುರ್ನಲ್ಲಿ ಅತ್ಯಧಿಕ ತಾಪಮಾನ 46.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹಲವು ತಾಲೂಕುಗಳಲ್ಲಿ ಸೂರ್ಯ ಬೆಂಕಿ ಉಂಡೆಯಾಗಿದ್ದು, 46.2 ರಿಂದ 46.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ರೀತಿಯ ಬಿಸಿಲ ತಾಪ ಮುನ್ನೆಚ್ಚರಿಕೆಯ ಅಲರಾಂ ಆಗಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿಗಳು ತಿಳಿಸಿದ್ದಾರೆ.
ಪ್ರತಿನಿತ್ಯ ಏರುತ್ತಿರುವ ಬಿಸಿಲು: ರಾಜ್ಯದಲ್ಲಿ ಪ್ರತಿನಿತ್ಯ 2.1 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚುತ್ತಿದ್ದು, ಇದು ಸಾಮಾನ್ಯವಾಗಿದೆ. ಕಳೆದ 1 ವರ್ಷ ಹಿಂದಿನ ಉಷ್ಣಾಂಶಕ್ಕೆ ಹೋಲಿಸಿದಾಗ ಈ ಬಾರಿ 7.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಉದಾಹರಣೆಗೆ ಕಳೆದ ವರ್ಷ ಜಗಿತ್ಯಾಳದಲ್ಲಿ 35.6 ಡಿಗ್ರಿ ತಾಪಮಾನ ದಾಖಲಾಗಿದ್ದರೆ, ಈ ಬಾರಿ 45.6 ಡಿಗ್ರಿ ಸೆಲ್ಶಿಯಸ್ ವರದಿಯಾಗಿದೆ. ಹವಾಮಾನ ಇಲಾಖೆ ಪ್ರಕಾರ, ನಲ್ಗೊಂಡ ಜಿಲ್ಲೆಯ 8 ತಾಲೂಕುಗಳಲ್ಲಿ, ಜಗಿತ್ಯಾಳನ 6ರಲ್ಲಿ ಮತ್ತು ಕರೀಂನಗರದ 4 ಮಂಡಲ, ಸಿದ್ದಿಪೇಟೆಯ 3, ಮಂಚಿರರಿಯಾದ 3, ಅಸಿಫಾಬಾದ್ನ 2 ತಾಲೂಕುಗಳಲ್ಲಿ ಆಲಿಕಲ್ಲು ಮಳೆಯಾಗಲಿದೆ. ಈ ತಿಂಗಳ 5ನೇ ತಾರೀಖಿನವರೆಗೆ ಈ ಆಲಿಕಲ್ಲು ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೂರ್ಯನ ತಾಪಕ್ಕೆ ಹೆಚ್ಚಿನ ಅನಾರೋಗ್ಯ:ಬಿಸಿಗಾಳಿ, ಅಧಿಕ ತಾಪಮಾನದಿಂದ ಬುಧವಾರ ಕರೀಂನಗರ ಜಿಲ್ಲೆಯ ರಮದುಗು ತಾಲೂಕಿನ ಗೋಪಾಲ್ ರಾವ್ಪೇಟ್ನ ಐದು ವರ್ಷದ ವಿಶೇಷಚೇತನ ಮಗು ಸಾವನ್ನಪ್ಪಿದೆ. ಜನಗಮ ನಗರ ಗುಡ್ಲಗಡ್ಡದಲ್ಲಿ ಮೊಹಮ್ಮದ್ ಮೊಯಿನುದ್ದೀನ್ (52) ಎಂಬ ಕಾರ್ಮಿಕ ಅಸ್ವಸ್ಥಗೊಂಡಿದ್ದಾರೆ. ಆದಿಲಾಬಾದ್ ಜಿಲ್ಲೆಯ ಸೋನಾಳ ಮಂಡಲದ ಪರಡಿ-ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ರಮ್ ಜಂಗು (48) ಮಧ್ಯಾಹ್ನ ಕೃಷಿ ಕೆಲಸ ಮುಗಿಸಿದ ಬಳಿಕ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಬಡವತಿ ಹಟಿಯಾ (68) ಬಿಸಿಲ ಬೇಗೆಯಿಂದ ಮಂಚಿರ್ಯಾಲ ಜಿಲ್ಲಾ ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಕರೀಂನಗರ ಜಿಲ್ಲೆ ತಿಮ್ಮಾಪುರ ಮಂಡಲದ ನುಸ್ತುಲಾಪುರದಲ್ಲಿ ಆಟೋ ಚಾಲಕ ರೊದ್ದ ನರಸಯ್ಯ (46) ಬಿಸಿಲ ತಾಪಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಹನುಮಕೊಂಡ ಜಿಲ್ಲೆಯ ಕಮಲಾಪುರ ಮಂಡಲದ ಪಟ್ಟಿಪಾಕ ರಮೇಶ್ (55) ಬಟ್ಟೆ ವ್ಯಾಪಾರಿ ಬಿಸಿಲಿನ ಬೇಗೆಯಿಂದಾಗಿ ಕೊನೆಯುಸಿರೆಳೆದರು.
ಚುನಾವಣಾ ಕಾರ್ಯಕ್ಕೆ ತೆರಳಿದ ಶಿಕ್ಷಕಿ ಸಾವು:ಬಶೀರಾಬಾದ್ ತಾಲೂಕಿನ ತಕಿತಂಡ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ರಾಣಿ (35) ಎಂಬ ಶಿಕ್ಷಕಿ ಸನ್ಸ್ಟ್ರೋಕ್ನಿಂದ ಸಾವನ್ನಪ್ಪಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆ ತಾಂಡೂರ್ ನಗರದ ಚುನಾವಣಾ ತರಬೇತಿಗೆ ಆಗಮಿಸಿದ್ದ ಅವರು ಸಂಜೆ ಬಸ್ನಲ್ಲಿ ತೆರಳುತ್ತಿದ್ದಾಗ ತಲೆನೋವು, ವಾಂತಿಯಿಂದ ಕುಸಿದು ಬಿದ್ದರು. ತಕ್ಷಣಕ್ಕೆ ಅವರನ್ನು ತಾಂಡೂರ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆದಾಗಲೇ ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಊಟಿಯನ್ನೂ ಬಿಡದ ಬಿಸಿಲ ಬೇಗೆ; ಗಿರಿಧಾಮದಲ್ಲಿ ದಾಖಲಾಯ್ತು ಅಧಿಕ ತಾಪಮಾನ