ಲಖನೌ(ಉತ್ತರ ಪ್ರದೇಶ):ಅಯೋಧ್ಯೆ ಶ್ರೀರಾಮ ಮಂದಿರ ದೇವಾಲಯದ ಪ್ರಧಾನ ಅರ್ಚಕರಾದ ಮಹಾಂತ್ ಸತ್ಯೇಂದ್ರ ದಾಸ್ (85) ಅವರು ಮೆದುಳಿನ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿರುವ ಮಹಾಂತ್ ಸತ್ಯೇಂದ್ರ ದಾಸ್ ಅವರನ್ನು ಭಾನುವಾರ ಇಲ್ಲಿನ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಎಸ್‌ಜಿಪಿಜಿಐ) ದಾಖಲಿಸಲಾಗಿದೆ. ತೀವ್ರ ನಿಗಾ ವಹಿಸಲಾಗಿದೆ. ಆದರೆ, ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನ ಅರ್ಚಕರು ಮೆದುಳಿನ ಪಾರ್ಶ್ವವಾಯು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಪ್ರಸ್ತುತ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಿತಿ ಗಂಭೀರವಾಗಿದ್ದರೂ ಅವರು ಮಾತುಗಳನ್ನು ಆಲಿಸುತ್ತಿದ್ದಾರೆ. ದೇಹದ ಇತರ ಅಂಗಗಳು ಸ್ಥಿರವಾಗಿವೆ. ನುರಿತ ವೈದ್ಯರ ತಂಡ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿದೆ.
ಅಯೋಧ್ಯೆ ಹೋರಾಟದ ಸಾಕ್ಷಿದಾರ:1992ರ ಡಿಸೆಂಬರ್ 6ರಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರಕ್ಕಾಗಿ ನಡೆದ ಹೋರಾಟಕ್ಕೂ (ಬಾಬರಿ ಮಸೀದಿ ಧ್ವಂಸ) ಮೊದಲು ಅವರು, ಪ್ರಧಾನ ಅರ್ಚಕರಾಗಿ ನೇಮಕವಾಗಿದ್ದರು. 20ನೇ ವಯಸ್ಸಿನಲ್ಲೇ ಸನ್ಯಾಸ ಜೀವನ ಸ್ವೀಕರಿಸಿದ್ದರು. ನಿರ್ವಾಣಿ ಅಖಾಡಕ್ಕೆ ಸೇರಿದ ಮಹಾಂತರು, ಮಂದಿರಕ್ಕಾಗಿ ನಡೆದ ಚಳವಳಿಯ ನಾಡಿಮಿಡಿತ ಬಲ್ಲ ಪ್ರಮುಖರಲ್ಲಿ ಒಬ್ಬರು.