ಹರಿಯಾಣ: ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಭರದಿಂದ ಸಾಗಿದ್ದು, ಆಡಳಿತಾರೂಢ ಬಿಜೆಪಿ ಅರ್ಧ ದಾರಿ ದಾಟಿದ್ದು 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಚುನಾವಣೋತ್ತರ ಸಮೀಕ್ಷೆಯಂತೆ ಅಧಿಕಾರದ ಗದ್ದುಗೆ ಏರುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ (36+) ಹಿನ್ನಡೆ ಸಾಧಿಸಿದೆ. 2014 ಮತ್ತು 2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿರುವ ಬಿಜೆಪಿ, ಇದೀಗ ಹ್ಯಾಟ್ರಿಕ್ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ ಎಂದು ಪಕ್ಷದ ವಕ್ತಾರರು ಹರ್ಷ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ ಪಂಚಕುಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿಯಾನ್ ಚಂದ್ ಗುಪ್ತಾ ಅವರು ಕಾಂಗ್ರೆಸ್‌ನ ಚಂದರ್ ಮೋಹನ್ ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ. ಪಕ್ಷದ ನಾಯಕರಾದ ಸುಧಾಂಶು ತ್ರಿವೇದಿ, ಅನಿಲ್ ಬಲುನಿ, ಅರುಣ್ ಸಿಂಗ್ ಮುನ್ನಡೆಗೆ ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ ಕಾಂಗ್ರೆಸ್ ಪ್ರಚಂಡ ಮುನ್ನಡೆ ಸಾಧಿಸಿತ್ತು. ಹೀಗಾಗಿ ಅತ್ತ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಲಾಗಿತ್ತು. 10 ಗಂಟೆ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಉಲ್ಟಾ ಆಗಿದ್ದು, ಹಿನ್ನಡೆ ಸಾಧಿಸಿದ್ದ ಬಿಜೆಪಿ ನಿಧಾನವಾಗಿ ಚೇತರಿಸಿಕೊಂಡು ಕಾಂಗ್ರೆಸ್ ಹಿಂದಿಕ್ಕಿ ಮುನ್ನಡೆ ಕಾಯ್ದುಕೊಂಡಿತು.
ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, ಮೊದಲು ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಯಿತು. ಅರ್ಧ ಗಂಟೆಗಳ ಬಳಿಕ ಇವಿಎಂ ಎಣಿಕೆ ಮಾಡಲಾಯಿತು. ರಾಜ್ಯದ 22 ಜಿಲ್ಲೆಗಳ 90 ವಿಧಾನಸಭಾ ಕ್ಷೇತ್ರಗಳಿಗೆ 93 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬಾದಶಹಪುರ, ಗುರುಗ್ರಾಮ ಮತ್ತು ಪಟೌಡಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಎರಡು ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಉಳಿದ 87 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದು ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ. ಮತ ಎಣಿಕೆ ಇನ್ನೂ ನಡೆಯುತ್ತಿದೆ. ಎಣಿಕೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು, 90 ಎಣಿಕೆ ವೀಕ್ಷಕರನ್ನು ಸಹ ಇಸಿಐ ನೇಮಿಸಿದೆ ಎಂದು ಹರಿಯಾಣ ಮುಖ್ಯ ಚುನಾವಣಾಧಿಕಾರಿ ಪಂಕಜ್ ಅಗರ್ವಾಲ್ ತಿಳಿಸಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಹರ್ಯಾಣದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದೆ. ಬಿಜೆಪಿ ಸಮಾಜದ ಎಲ್ಲಾ ವರ್ಗದವರಿಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದೆ. ನಮ್ಮ ಸರ್ಕಾರ ಹರಿಯಾಣದ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ. ಅಲ್ಲದೇ ರಾಜ್ಯದಲ್ಲಿ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರದ ರಚನೆಯಾಗಲಿದೆ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತದಾನಗಳ ಎಣಿಕೆ ಪ್ರಕ್ರಿಯೆ ಆರಂಭಕ್ಕೂ ಮುನ್ನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಇದೇ ತಿಂಗಳ 5ರಂದು ಒಂದೇ ಹಂತದಲ್ಲಿ 90 ಸ್ಥಾನಗಳಿಗೆ ಮತದಾನ ನಡೆದಿತ್ತು. ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶವು ಮುಂಬರುವ ವಿಧಾನಸಭಾ ಚುನಾವಣೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಇದನ್ನೂ ಓದಿ:ಇಂದು ಹರಿಯಾಣ, ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ: ಯಾರಿಗೆ ಸಿಹಿ-ಕಹಿ? - ELECTION RESULTS