ಕಾನ್ಪುರ (ಉತ್ತರಪ್ರದೇಶ):ಸಿನಿಮಾ ಸ್ಟೈಲಲ್ಲಿ ನಡೆದಿದ್ದಕೊಲೆ ಪ್ರಕರಣವನ್ನು ಉತ್ತರಪ್ರದೇಶ ಪೊಲೀಸರು ಕೊನೆಗೂ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಮ್ ತರಬೇತುದಾರನೋರ್ವ ತನ್ನೊಂದಿಗೆ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಕೊಂದು ಶವವನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುಂಡಿ ತೋಡಿ ಹೂತಿಟ್ಟ ಆರೋಪದಡಿ ಅಂದರ್ ಆಗಿದ್ದಾನೆ. ಆರೋಪಿಯು ಕೊಲೆ ಮುಚ್ಚಿಹಾಕಲು ರೂಪಿಸಿದ ಯೋಜನೆಯೇ ರೋಚಕವಾಗಿದೆ.
ಪ್ರಕರಣದ ವಿವರ:ಆರೋಪಿ ವಿಮಲ್ ಸೋನಿ ಬಳಿ ಉದ್ಯಮಿಯೊಬ್ಬರ ಪತ್ನಿ ಏಕ್ತಾ ಗುಪ್ತಾ ಅವರು ಜಿಮ್ ತರಬೇತಿಗೆ ಬರುತ್ತಿದ್ದರು. ಈ ವೇಳೆ ಇಬ್ಬರ ಮಧ್ಯೆ ವಿವಾಹೇತರ ಸಂಬಂಧ ಬೆಳೆದಿದೆ. ಕೆಲ ದಿನಗಳ ಬಳಿಕ ಜಿಮ್ ತರಬೇತುದಾರನಿಗೆ ವಿವಾಹ ಕುದುರಿದೆ. ಇದು ಮಹಿಳೆಗೆ ಅಸಮಾಧಾನ ತಂದಿತ್ತು. ಆರೋಪಿಯ ವಿವಾಹಕ್ಕೆ ಮಹಿಳೆ ಆಕ್ಷೇಪ ಎತ್ತಿದ್ದಳು. ಇದೇ ಕಾರಣಕ್ಕಾಗಿ ಇಬ್ಬರ ಮಧ್ಯೆ ಹಲವು ಬಾರಿ ಕಿತ್ತಾಟವೂ ನಡೆದಿತ್ತು ಅನ್ನೋದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಜೂನ್ 24 ರಂದು ವಿಮಲ್ ಮತ್ತು ಏಕ್ತಾ ಅವರ ಮಧ್ಯೆ ಜಿಮ್ನಲ್ಲೇ ಮತ್ತೆ ಜಗಳವಾಗಿತ್ತು. ಈ ವೇಳೆ ಆಕೆಯನ್ನು ಕಾರಿನಲ್ಲಿ ಕರೆದೊಯ್ದ ವಿಮಲ್ ಈ ಬಗ್ಗೆ ಮಹಿಳೆಯನ್ನು ಮನವೊಲಿಸಲು ಪ್ರಯತ್ನಿಸಿದ್ದ. ಆದರೆ, ಆಕೆ ಸುತಾರಾಂ ಒಪ್ಪಿರಲಿಲ್ಲ. ಇದರಿಂದ ಕುಪಿತನಾದ ಜಿಮ್ ತರಬೇತುದಾರ ಮಹಿಳೆಯ ಕುತ್ತಿಗೆಗೆ ಬಲವಾಗಿ ಗುದ್ದಿದ್ದ. ಬಿದ್ದ ಹೊಡೆತಕ್ಕೆ ಮಹಿಳೆ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿ ಕಚೇರಿಯಲ್ಲಿ ಶವ ಸಂಸ್ಕಾರ:ಏಕ್ತಾ ಅವರ ಸಾವಿನಿಂದ ಭೀತಿಗೊಂಡ ವಿಮಲ್, ಕೊಲೆ ಪ್ರಕರಣ ಮುಚ್ಚಿ ಹಾಕಲು ಭರ್ಜರಿ ಪ್ಲಾನ್ ಮಾಡಿದ್ದಾನೆ. ಸಿನಿಮಾ ಮಾದರಿಯಲ್ಲಿ ಯೋಚಿಸಿ, ಶವವನ್ನು ಹತ್ತಿರವೇ ಇದ್ದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಹೂತು ಹಾಕಲು ನಿರ್ಧರಿಸಿದ್ದ. ರಾತ್ರೋರಾತ್ರಿ ಮಹಿಳೆಯ ಶವವನ್ನು ಡಿಸಿ ಕಚೇರಿಗೆ ತಂದು ಅಲ್ಲಿನ ನಿರ್ಜನ ಪ್ರದೇಶದಲ್ಲಿ ಯಾರಿಗೂ ಗೊತ್ತಾಗದ ಹಾಗೆ 8 ಅಡಿ ಆಳ ಗುಂಡಿ ತೋಡಿ ಶವಸಂಸ್ಕಾರ ಮಾಡಿದ್ದ. ಇಲ್ಲಿ ಹೂತಿದ್ದೇ ಆದಲ್ಲಿ ಪತ್ತೆ ಕಷ್ಟ ಎಂಬುದು ಆತನ ದುರಾಲೋಚನೆ ಆಗಿತ್ತು.