ಶಿಯೋಪುರ (ಮಧ್ಯಪ್ರದೇಶ): ವರನೊಬ್ಬ ಕುದುರೆ ಮೇಲೆ ಮೆರವಣಿಗೆ ಸಾಗುತ್ತಾ ಬರುತ್ತಿರುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದ ಶಿಯೋಪುರದಲ್ಲಿ ಶುಕ್ರವಾರ ನಡೆದಿದೆ. ಪ್ರದೀಪ್ ಸಿಂಗ್ ಜಾಟ್ ಹೃದಯಾಘಾತದಿಂದ ಮೃತಪಟ್ಟ ವರ.
ವರ ಕುದುರೆ ಮೇಲಿನಿಂದ ಕುಸಿದು ಬಿದ್ದ ತಕ್ಷಣ ಸಂಬಂಧಿಕರು, ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷಿಸಿ ಪ್ರದೀಪ್ ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿಸಿದರು ಎಂದು ಮೃತನ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ವ್ಯಕ್ತಿಯ ಅಂತಿಮ ಕ್ಷಣಗಳ ವಿಡಿಯೋ ಸೆರೆಯಾಗಿದ್ದು, ಸಾಂಪ್ರದಾಯಿಕ ಉಡುಗೆಯನ್ನು ಧರಿಸಿರುವ ವರ ಪ್ರದೀಪ್ ಸಿಂಗ್ ಜಾಟ್ ಮದುವೆ ಮೆರಣಿಗೆಯಲ್ಲಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ನಂತರ ಕುದುರೆ ಏರಿ ಮದುವೆ ಸಮಾರಂಭ ನಡೆಯುತ್ತಿದ್ದ ಸ್ಥಳಕ್ಕೆ ಬರುತ್ತಿದ್ದಾಗ ಇದ್ದಕ್ಕಿದಂತೆ ವರ ಕುದುರೆ ಮೇಲಿಂದಲೇ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು.
ವರ ಪ್ರದೀಪ್ ಸ್ನೇಹಿತ ಸುನಿಲ್ ಚೌಧರಿ ಪ್ರತಿಕ್ರಿಯಿಸಿ, ಪ್ರದೀಪ್ ಆರೋಗ್ಯ ಸ್ಥಿತಿ ಇದ್ದಕ್ಕಿದ್ದಂತೆ ಗಂಭೀರವಾಯಿತು, ಆದ್ದರಿಂದ ಅವರು ಕುದುರೆಯಿಂದ ಕುಸಿದು ಬಿದ್ದರು. ನಂತರ, ನಾವು ಪ್ರದೀಪ್ಗೆ ಸಿಪಿಆರ್ ಮಾಡಿದೆವು, ಆದರೆ ಆತ ಸ್ಪಂದಿಸಲಿಲ್ಲ ಎಂದು ಹೇಳಿದರು.