ಶಹಜಹಾನ್‌ಪುರ(ಉತ್ತರ ಪ್ರದೇಶ):ಮೇ 25ರ ಶನಿವಾರ ಕರಾಳ ದಿನವಾಗಿವೆ. ಗುಜರಾತ್ ರಾಜ್ಕೋಟ್ನಲ್ಲಿನ ಗೇಮ್ಝೋನ್ನಲ್ಲಿ ಬೆಂಕಿ ಹೊತ್ತಿಕೊಂಡು 28 ಜನರು ಸುಟ್ಟು ಕರಕಲಾಗಿದ್ದರೆ, ದೆಹಲಿಯ ಬೇಬಿ ಕೇರ್ ಆಸ್ಪತ್ರೆಯಲ್ಲಿ ಬೆಂಕಿ ದುರಂತಕ್ಕೆ 6 ಮಕ್ಕಳು ಅಸುನೀಗಿದ್ದಾರೆ. ಇದರ ಬೆನ್ನಲ್ಲೇ, ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಜಲ್ಲಿ ಕಲ್ಲು ತುಂಬಿದ್ದ ಲಾರಿ ರಭಸವಾಗಿ ಡಿಕ್ಕಿ ಹೊಡೆದು ಬಸ್ ಮೇಲೆ ಪಲ್ಟಿಯಾಗಿ 11 ಭಕ್ತರು ದುರಂತ ಸಾವು ಕಂಡ ಘಟನೆ ನಡೆದಿದೆ.
ಈ ಅವಘಡ ಶನಿವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ನಡೆದಿದೆ. ಖಾಸಗಿ ಬಸ್ನಲ್ಲಿ ಭಕ್ತರು ಸೀತಾಪುರದಿಂದ ಪೂರ್ಣಗಿರಿಗೆ ತೆರಳುತ್ತಿದ್ದರು. ಈ ವೇಳೆ ಊಟಕ್ಕೆಂದು ಢಾಬಾ ಬಳಿ ನಿಲ್ಲಿಸಿದ್ದಾಗ ಯಮನಂತೆ ಬಂದ ಲಾರಿ ಡಿಕ್ಕಿ ಹೊಡೆದು, 11 ಮಂದಿಯನ್ನು ಬಲಿ ಪಡೆದಿದೆ. ಘಟನೆಯಲ್ಲಿ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ಪೂರ್ಣ ವಿವರ:ಸೀತಾಪುರ ಜಿಲ್ಲೆಯ ಬರಜೆಥಾ ಗ್ರಾಮದ ನಿವಾಸಿಗಳು ಶನಿವಾರ ರಾತ್ರಿ ಪೂರ್ಣಗಿರಿ ಕ್ಷೇತ್ರಕ್ಕೆ ಖಾಸಗಿ ಬಸ್ನಲ್ಲಿ ಹೋಗುತ್ತಿದ್ದರು. ಶಹಜಹಾನ್‌ಪುರದ ಗೋಲಾ ಬೈಪಾಸ್ ರಸ್ತೆಯ ಡಾಬಾದ ಬಳಿ ಊಟಕ್ಕೆಂದು ಬಸ್ ನಿಲ್ಲಿಸಲಾಗಿದೆ. ಕೆಲವರು ಬಸ್ ಇಳಿದು ಡಾಬಾದೊಳಗೆ ಹೋಗಿದ್ದರು. ಇನ್ನು ಕೆಲವರು ಬಸ್ನೊಳಗೆ ಕುಳಿತಿದ್ದರು.
ಈ ವೇಳೆ ಜಲ್ಲಿ ಕಲ್ಲು ತುಂಬಿದ್ದ ಲಾರಿಯೊಂದು ವೇಗವಾಗಿ ಬಂದು ನಿಂತಿದ್ದ ಬಸ್ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಲ್ಲದೇ, ಬಸ್ ಮೇಲೆಯೇ ಬಿದ್ದಿದೆ. ಇದರಿಂದ ಜಲ್ಲಿಕಲ್ಲಿನೊಳಗೆ ಜನರು ಹೂತು ಹೋಗಿದ್ದಾರೆ. ಅಪಘಾತದ ನಂತರ ಕಿರುಚಾಟ ಕೇಳಿಬಂದಿದ್ದು, ಅಕ್ಕಪಕ್ಕದಲ್ಲಿದ್ದವರು ನೆರವಿಗೆ ಧಾವಿಸಿದ್ದಾರೆ.