ನವದೆಹಲಿ: ಥರಗುಟ್ಟುವ ಚಳಿ ನಡುವೆ ರಾಷ್ಟ್ರರಾಜಧಾನಿಯಲ್ಲಿ ವಾಯುಮಾಲಿನ್ಯ ತೀವ್ರ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಚಳಿಗಾಲದ ಮಾಲಿನ್ಯ ನಿಯಂತ್ರಣ ಯೋಜನೆ ಅಡಿ ದೆಹಲಿ- ಎನ್ಸಿಆರ್ನಲ್ಲಿ 4ನೇ ಹಂತದ ಜಿಆರ್ಎಪಿಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ.
ಪ್ರತಿಕೂಲ ಹವಾಮಾನದ ಜೊತೆಗೆ ಮಾಲಿನ್ಯ ಹತ್ತಿಕ್ಕಲು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) 4ನೇ ಹಂತ ಜಾರಿ ಮಾಡಲಾಗಿದೆ. ಈ ಮೂಲಕ ದೆಹಲಿಯಲ್ಲಿ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಅನಗತ್ಯ ಸರಕುಗಳ ಟ್ರಕ್ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, 10 ರಿಂದ 12ನೇ ತರಗತಿವರೆಗಿನ ಶಾಲೆಗಳನ್ನು ಹೈಬ್ರಿಡ್ ಮಾದರಿ ಅನುಸರಿಸುವಂತೆ ಸೂಚಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 379ರಿಂದ 400ಕ್ಕೆ ಏರಿದೆ. ತಣ್ಣಗಿನ ಗಾಳಿ ಕೂಡ ದಟ್ಟ ಮಂಜಿನ ಹೊದಿಕೆ ಸೃಷ್ಟಿಸಿದ್ದು, ಇದು ಪ್ರತಿಕೂಲಕರ ಹವಾಮಾನದ ಜೊತೆಗೆ ಮಾಲಿನ್ಯಕ್ಕೆ ಕಾರಣವಾಗಲಿದೆ.
350 ದಾಟಿದ AQI:ದೆಹಲಿಯ ಸೋಮವಾರ ಮಧ್ಯಾಹ್ನ ಎಕ್ಯೂಐ 350 ದಾಟಿದ ಹಿನ್ನೆಲೆ ಜಿಆರ್ಎಪಿ ಹಂತ 3 ರ ಅಡಿ ಕಮಿಷನ್ ಫಾರ್ ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್ ನಿರ್ಬಂಧಿತ ಕ್ರಮಗಳನ್ನು ಜಾರಿಗೊಳಿಸಿತು. ಇದಾದ ಕೆಲವೇ ಗಂಟೆಗಳ ನಂತರ ಹಂತ 4 ನಿರ್ಬಂಧಗಳನ್ನು ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಪರಿಷ್ಕೃತ ಜಿಆರ್ಎಪಿ ಮಾರ್ಗಸೂಚಿಯಂತೆ ಗುರುಗ್ರಾಂ, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ ಬುದ್ಧ ನಗರದಲ್ಲಿ ಶಾಲೆಗಳು 4ನೇ ಹಂತದ ಅಡಿ ಗ್ರೇಡ್ 6 ರಿಂದ 11ರವರೆಗೆ ಹೈಬ್ರೀಡ್ ಮಾದರಿ ಅನುಸರಿಸಬೇಕಿದೆ. 5ನೇ ತರಗತಿವರೆಗೆ 3ನೇ ಹಂತದವರೆಗೆ ಹೈಬ್ರೀಡ್ ಮಾದರಿಗೆ ಬದಲಾಯಿಸಬಹುದಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಅಗತ್ಯವಿದ್ದಲ್ಲಿ ಆನ್‌ಲೈನ್ ಶಿಕ್ಷಣ ಆಯ್ಕೆ ಮಾಡಬಹುದಾಗಿದೆ.
ಮಾಲಿನ್ಯ ಸೃಷ್ಟಿಸುವ ಚಟುವಟಿಕೆಗಳ ಮೇಲೆ ನಿರ್ಬಂಧ:4ನೇ ಹಂತದಲ್ಲಿ ಮೇಲ್ಸೇತುವೆಗಳು, ವಿದ್ಯುತ್ ಮಾರ್ಗಗಳು ಮತ್ತು ಪೈಪ್‌ಲೈನ್‌ಗಳಂತಹ ಸಾರ್ವಜನಿಕ ಯೋಜನೆಗಳು ಸೇರಿದಂತೆ ಎಲ್ಲ ಕಟ್ಟಡ ನಿರ್ಮಾಣ ಮತ್ತು ಕಟ್ಟಡ ಧ್ವಂಸ ಚಟುವಟಿಕೆಗಳ ಮೇಲಿನ ನಿರ್ಬಂಧ ವಿಧಿಸಲಾಗಿದ್ದು, ನಗರದೊಳಗೆ ಅಗತ್ಯವಲ್ಲದ ಡೀಸೆಲ್ ಟ್ರಕ್‌ಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಕಚೇರಿಗಳಲ್ಲಿ ಶೇ 50 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಣೆ, ಉಳಿದವರಿಗೆ ಮನೆಯಿಂದಲೇ ಕೆಲಸ:ಸಾರ್ವಜನಿಕ, ಪುರಸಭೆ ಮತ್ತು ಖಾಸಗಿ ಕಚೇರಿಗಳು ಕೇವಲ ಶೇ 50ರಷ್ಟು ಸಿಬ್ಬಂದಿಯನ್ನು ಕಚೇರಿಗಳಲ್ಲಿ ಉಳಿದ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವ ಕುರಿತು ನಿರ್ಧರಿಸಬೇಕು. ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಅಗತ್ಯವಲ್ಲದ ಉದ್ಯಮ ಮತ್ತು ಬೆಸ ಸಮ ವಾಹನ ನಿರ್ಬಂಧಗಳನ್ನು ಜಾರಿಗೊಳಿಸುವಂತಹ ಹೆಚ್ಚುವರಿ ಕ್ರಮಗಳು ಈ ಹಂತದ ಪ್ರಮುಖ ಕ್ರಮವಾಗಿದೆ.
ಡಿಸೆಂಬರ್ ಮೊದಲ ವಾರದಲ್ಲಿ ವಾಯುಗುಣಮಟ್ಟ ಸುಧಾರಣೆ ಕಂಡ ಹಿನ್ನೆಲೆ ಸುಪ್ರೀಂ ಕೋರ್ಟ್ ಸಿಎಕ್ಯೂಎಂಗೆ ಅನುಮತಿ ನೀಡಿತು. ಇದೀಗ ಪ್ರತಿಕೂಲ ಹವಾಮಾನದ ಜೊತೆಗೆ ವಾಯು ಮಾಲಿನ್ಯ, ಭತ್ತದ ಒಣಹುಲ್ಲು ಸುಡುವಿಕೆ, ಪಟಾಕಿಯಂತಹ ಮಾಲಿನ್ಯಗಳು ಮತ್ತೆ ಇಲ್ಲಿನ ಗಾಳಿ ಗುಣಮಟ್ಟ ಕುಸಿಯುವಂತೆ ಮಾಡಿದೆ. ಸದ್ಯ ದೆಹಲಿಯಲ್ಲಿನ ಮಾಲಿನ್ಯದಲ್ಲಿ ಉಸಿರಾಡುವುದು. ದಿನಕ್ಕೆ 10 ಸಿಗರೇಟ್ ಸೇದುವಷ್ಟೇ ಅಪಾಯ ಹೊಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ದೀರ್ಘಕಾಲಕ್ಕೆ ಈ ರೀತಿಯ ಕೆಟ್ಟ ಹವಾಮಾನಕ್ಕೆ ತೆರೆದುಕೊಳ್ಳುವುದರಿಂದ ಆರೋಗ್ಯ ಸಮಸ್ಯೆ ಹೆಚ್ಚಲಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಈ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಹವಾಮಾನ ಇಲಾಖೆಯಿಂದ ಎಚ್ಚರಿಕೆ ರವಾನೆ