ಅಹಮದಾಬಾದ್:ಅನೇಕ ಬಾರಿ ಮಕ್ಕಳು ಏನು ತಿನ್ನುತ್ತಾರೆ ಎಂಬುದರ ಬಗ್ಗೆ ಪೋಷಕರು ಹೆಚ್ಚಿನ ಗಮನ ನೀಡುವುದಿಲ್ಲ. ಕೈಗೆ ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಮಕ್ಕಳು ಜೀವಕ್ಕೆ ಕುತ್ತು ತಂದುಕೊಳ್ಳುವ ಸಾಧ್ಯತೆಗಳಿರುತ್ತವೆ. ಅದಕ್ಕೆ ಉದಾಹರಣೆ ಈ ಘಟನೆ. ರಾಜಸ್ಥಾನದಲ್ಲಿ ಒಂದು ವರ್ಷದ ಮಗುವೊಂದು ಜೋಳದ ಕಾಳೊಂದನ್ನು ಬಾಯಿಗೆ ಹಾಕಿಕೊಂಡು, ಜೀವನ್ಮರಣದ ಹೋರಾಟ ನಡೆಸಿ, ವೈದ್ಯರ ಸಮಯಪ್ರಜ್ಞೆಯಿಂದ ಬದುಕುಳಿದಿದೆ.
'ವೈದ್ಯೋ ನಾರಾಯಣೋ ಹರಿ' ಎಂಬಂತೆ ಅಹಮದಾಬಾದ್ನ ಸಿವಿಲ್ ಆಸ್ಪತ್ರೆಯ ಮಕ್ಕಳ ವಿಭಾಗದ ತಜ್ಞರಾದ ಡಾ.ರಾಕೇಶ್ ಜೋಶಿ ಮಗುವಿಗೆ ಬೈನಾಕ್ಯೂಲರ್ ನಡೆಸಿ, ಶ್ವಾಸಕೋಶದಲ್ಲಿ ಸಿಲುಕಿದ್ದ ಜೋಳದ ಕಾಳನ್ನು ಹೊರತೆಗೆದು, ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸ ಜನ್ಮ ಪಡೆದ ಮಗು: ರಾಜಸ್ಥಾನದ ರಾಜಸ್ಮಂದ್ ಮೂಲದ ಕನ್ಸಿಂಗ್ ರಾವತ್ ಮತ್ತು ಸಂತೋಷ ದೇವಿ ಮಧ್ಯಮ ವರ್ಗದ ಕುಟುಂಬದ ದಂಪತಿಗಳಾಗಿದ್ದು, ಅವರ ಒಂದು ವರ್ಷದ ಮಗುವು ಆಟವಾಡುವಾಗ ಜೋಳದ ಕಾಳು ಬಾಯಿಗೆ ಹಾಕಿಕೊಂಡಿತ್ತು. ಇದರಿಂದ ಮಗುವಿನ ಉಸಿರಾಟಕ್ಕೆ ತೊಂದರೆ ಉಂಟಾಗಿತ್ತು. ಬಳಿಕ ದಂಪತಿಯು ಅಜ್ಮೀರ್ನ ಬೈವಾರ್ನ ಮಕ್ಕಳ ತಜ್ಞರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸಿಟಿ ಸ್ಕ್ಯಾನ್ ಮಾಡಿದಾಗ ಮಗುವಿನ ಶ್ವಾಸಕೋಶದಲ್ಲಿ ಜೋಳದ ಕಾಳು ಇರುವುದನ್ನು ಕಂಡು ತಕ್ಷಣಕ್ಕೆ ಮಗುವನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡಿದ್ದಾರೆ.