ನವದೆಹಲಿ:ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಕಾಯ್ದಿರಿಸಿದ ಯಾವುದೇ ಖಾಲಿ ಹುದ್ದೆಯನ್ನು ಈ ವರ್ಗಗಳ ಸಾಕಷ್ಟು ಅಭ್ಯರ್ಥಿಗಳು ಲಭ್ಯವಿರದಿದ್ದರೆ ಅದನ್ನು ''ಮೀಸಲುರಹಿತ ಎಂದು ಘೋಷಿಸಬಹುದು'' ಎಂದು ಪ್ರಸ್ತಾಪಿಸುವ ವಿಶ್ವವಿದ್ಯಾಲಯ ಧನಸಹಾಯ ಆಯೋಗದ(ಯುಜಿಸಿ) ಕರಡು ಮಾರ್ಗಸೂಚಿಯ ಕುರಿತು ಭಾನುವಾರ ವಿವಾದ ಭುಗಿಲೆದ್ದಿತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ತೆಗೆದುಹಾಕುವ ಹುನ್ನಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದವು.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ:''ಕೇಂದ್ರ ಶಿಕ್ಷಣ ಸಂಸ್ಥೆಗಳ (ಶಿಕ್ಷಕರ ವೃಂದದಲ್ಲಿ ಮೀಸಲಾತಿ) ಕಾಯಿದೆ- 2019 ಪರಿಚಯಿಸಿದ ನಂತರ ಒಂದೇ ಒಂದು ಹುದ್ದೆಯ ಮೀಸಲಾತಿ ರದ್ದತಿಯನ್ನೂ ಮಾಡುವುದಿಲ್ಲ. ಮೀಸಲಾತಿಯ ಬಗ್ಗೆ ಯಾವುದೇ ಅಸ್ಪಷ್ಟತೆಗೆ ಅವಕಾಶವಿಲ್ಲ'' ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ.
ಯುಜಿಸಿ ಅಧ್ಯಕ್ಷ ಎಂ.ಜಗದೇಶ್ ಕುಮಾರ್ ಪ್ರತಿಕ್ರಿಯಿಸಿ, ''ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ (ಸಿಇಐ) ಈ ಹಿಂದೆ ಯಾವುದೇ ಮೀಸಲಾತಿ ವರ್ಗದ ಹುದ್ದೆಗಳ ಮೀಸಲಾತಿ ರದ್ದುಗೊಳಿಸಿಲ್ಲ'' ಎಂದು ತಿಳಿಸಿದ್ದಾರೆ.
ಯುಜಿಸಿ ಕರಡು ಮಾರ್ಗಸೂಚಿಗಳಿಗೆ ಆಕ್ಷೇಪ:ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾರತ ಸರ್ಕಾರದ ಮೀಸಲಾತಿ ನೀತಿಯ ಅನುಷ್ಠಾನದ ಕರಡು ಮಾರ್ಗಸೂಚಿಗಳಿಗೆ ಜನವರಿ 28ರವರೆಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಕೇಳಲಾಗಿತ್ತು. ಈ ಮಾರ್ಗಸೂಚಿಗಳಿಗೆ ಹಲವೆಡೆಗಳಿಂದ ಆಕ್ಷೇಪ ಕೇಳಿಬಂದಿವೆ. ''ಬಿಜೆಪಿ ಕೇವಲ ಯುವಕರ ಉದ್ಯೋಗ ಕಿತ್ತುಕೊಳ್ಳುವುದರಲ್ಲಿ ನಿರತವಾಗಿದೆ'' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ''ಈ ಪ್ರಸ್ತಾವನೆಯನ್ನು ಕೂಡಲೇ ಹಿಂಪಡೆಯಬೇಕು'' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆಗ್ರಹಿಸಿದ್ದರು.