ನವದೆಹಲಿ: ಟ್ರಾಫಿಕ್ ನಿಯಮ ಉಲ್ಲಂಘನೆ ಪರಿಶೀಲನೆ ಮತ್ತು ದಂಡವನ್ನು ನಿಖರವಾಗಿ ವಿಧಿಸುವ ಸಲುವಾಗಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಇತರೆ ಅವಿಷ್ಕಾರಕ ಮಾದರಿಗಳನ್ನು ಬಳಕೆ ಮಾಡುವ ಕುರಿತು ಸರ್ಕಾರ ಪ್ರಸ್ತಾಪ ಹೊಂದಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಟ್ರಾಫಿಕ್ ಇನ್ಫ್ರಾಟೆಕ್ ಎಕ್ಸ್ಪೊನ 12ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಸುಧಾರಿತ ಇಂಜಿನಿಯರಿಂಗ್ ಪರಿಹಾರ, ನಿಯಮಗಳ ಜಾರಿ ಮತ್ತು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗ ಬಳಕೆ ಮಾಡದೆ ರಸ್ತೆ ಸುರಕ್ಷತೆ ಜಾರಿ ಸಾಧನೆ ಮಾಡಲು ಸಾಧ್ಯವಿಲ್ಲ. ಸ್ಯಾಟಲೈಟ್ ಟೋಲ್ ಸಿಸ್ಟಂ ಅವಿಷ್ಕಾರ ಸೇರಿದಂತೆ ಟೋಲ್ ಸಂಗ್ರಹ ಮಾದರಿಯನ್ನು ಉನ್ನತೀಕರಿಸಲು ಯೋಜನೆ ಹೊಂದಿದೆ. ಇದರಿಂದ ಟೋಲ್ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಸಾಮರ್ಥ್ಯ ಸುಧಾರಣೆ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ರಸ್ತೆ ಸುರಕ್ಷತೆಗಾಗಿ ಸರ್ಕಾರವು ತಂತ್ರಜ್ಞಾನ ಸುಧಾರಣೆ ಅಭಿವೃದ್ಧಿಗಾಗಿ ಖಾಸಗಿ ವಲಯಗಳೊಂದಿಗೆ ಸಹಯೋಗ ಹೊಂದಲಿದೆ. ಇದಕ್ಕೆಂದೇ ಇರುವ ತಜ್ಞರ ಸಮಿತಿ ಸ್ಟಾರ್ಟ್ಅಪ್ ಮತ್ತು ಉದ್ಯಮ ನಾಯಕರೊಂದಿಗೆ ಈ ಪ್ರಸ್ತಾಪ ಮುಂದಿಡಲಿದ್ದು, ಅದು ಮೌಲ್ಯಮಾಪನ ನಡೆಸಲಿದೆ. ಈ ಸಮಿತಿಯು ವೇಗದ ಸುಧಾರಣೆ ಗುರಿಯೊಂದಿಗೆ ಇನ್ನು ಮೂರು ತಿಂಗಳೊಳಗೆ ಈ ಕುರಿತು ತೀರ್ಮಾನ ಮಾಡಲಿದೆ ಎಂದು ಹೇಳಿದರು.