ನವದೆಹಲಿ: ಆಯ್ದ ಕೆಲ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ನಿಯಮಗಳನ್ನು ತಿರುಚಿ ಕಲ್ಲಿದ್ದಲು ಹರಾಜನ್ನು ನಡೆಸಿದೆ. ಇದರಿಂದ ಭಾರಿ ಆದಾಯ ನಷ್ಟ ಉಂಟಾಗಿದೆ ಎಂದು ಸಿಎಜಿ ವರದಿ ಉಲ್ಲೇಖಿಸಿ ಕಾಂಗ್ರೆಸ್ ಆರೋಪ ಮಾಡಿದೆ. ಇದೇ ವೇಳೆ, ಈ ಕಲ್ಲಿದ್ದಲು ಹರಾಜಿನ ಬಗ್ಗೆ ಕಳವಳ ವ್ಯಕ್ತಪಡಿಸಿ ಇಬ್ಬರು ಬಿಜೆಪಿ ನಾಯಕರು ಬರೆದ ಪತ್ರಗಳ ಬಗ್ಗೆ ಸರ್ಕಾರ ಮತ್ತು ಪ್ರಧಾನಿ ಏಕೆ ಕ್ರಮ ಕೈಗೊಂಡಿಲ್ಲ?, ಈ ವಿಷಯದ ಬಗ್ಗೆಯೂ ಇಡಿ ತನಿಖೆಗೆ ಸರ್ಕಾರ ಆದೇಶಿಸುತ್ತದೆಯೇ ಎಂದು ಪ್ರಶ್ನಿಸಿದೆ.
ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಪವನ್ ಖೇರಾ, 2015ರಲ್ಲಿ ಕಲ್ಲಿದ್ದಲು ಹರಾಜಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಿಜೆಪಿ ನಾಯಕರು, ಹಾಲಿ ಸಚಿವರಾದ ಆರ್.ಕೆ.ಸಿಂಗ್ ಮತ್ತು ರಾಜೀವ್ ಚಂದ್ರಶೇಖರ್ ಅವರ ಪತ್ರಗಳನ್ನು ಬಹಿರಂಗ ಪಡಿಸಿದರು. ಅಲ್ಲದೇ, ಎರಡು ಕಂಪನಿಗಳಿಗೆ ಮಾತ್ರ ಬಿಡ್ ಮಾಡಲು ಅವಕಾಶ ನೀಡಲಾಗಿದೆ. ಇದು ಕಾರ್ಟೆಲೈಸೇಶನ್ ಮತ್ತು ಆದಾಯದ ನಷ್ಟಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಇದರ ನಂತರವೇ ಈ ಇಬ್ಬರನ್ನು ಸಚಿವರನ್ನಾಗಿ ಮಾಡಲಾಗಿದ್ದು, ಇದಾದ ಬಳಿಕ ಈ ವಿಷಯದಲ್ಲಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಈ ಕುರಿತು ಮೋದಿ ಸರ್ಕಾರವು ಇಡಿ ದಾಳಿಗೆ ಆದೇಶಿಸುತ್ತದೆಯೇ?, ಈ ಹಗರಣ ಮತ್ತು ಭ್ರಷ್ಟಾಚಾರದ ಕಥೆಯನ್ನು ತನಿಖೆ ಮಾಡುತ್ತದೆ ಎಂದು ಪ್ರಶ್ನಿಸಿದರು.