ನವದೆಹಲಿ: ಈ ವರ್ಷದ ಜುಲೈ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (ಡಿಎ) ಶೇಕಡಾ 3ರಷ್ಟು ಹೆಚ್ಚಿಸಲಾಗಿದೆ. ಈ ಮೂಲಕ ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ 1 ಕೋಟಿಗೂ ಹೆಚ್ಚು ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಖುಷಿ ಸುದ್ದಿ ಸಿಕ್ಕಂತಾಗಿದೆ.
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಪರಿಹಾರ (ಡಿಆರ್) ಅನ್ನು ಮೂಲ ವೇತನ/ಪಿಂಚಣಿಯ ಶೇಕಡಾ 3ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಸಂಪುಟ ಸಭೆಯ ನಂತರ ತಿಳಿಸಿದ್ದಾರೆ.
ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದೀಪಾವಳಿ ಶುಭಾಶಯಗಳನ್ನು ಕೋರಿದ ಸಚಿವರು, ಡಿಎ/ಡಿಆರ್ ಹೆಚ್ಚಳವು ಜುಲೈ 1, 2024ರಿಂದ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದರು. ಈ ಡಿಎ/ಡಿಆರ್ ಹೆಚ್ಚಳದಿಂದ ಕೇಂದ್ರ ಸರ್ಕಾರದ ಬೊಕ್ಕಸದ ಮೇಲೆ 9,448 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅವರು ಮಾಹಿತಿ ನೀಡಿದರು. ಇದಕ್ಕೂ ಮುನ್ನ ಈ ವರ್ಷದ ಮಾರ್ಚ್ನಲ್ಲಿ ಕೇಂದ್ರ ಸರ್ಕಾರವು ಜನವರಿ 1, 2024ರಿಂದ ಜಾರಿಗೆ ಬರುವಂತೆ ಶೇಕಡಾ 4ರಷ್ಟು ಅಂಶಗಳಷ್ಟು ಡಿಎ/ಡಿಆರ್ ಹೆಚ್ಚಿಸಿತ್ತು.
ಡಿಎ ಹೆಚ್ಚಳವು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ-ಕೈಗಾರಿಕಾ ಕಾರ್ಮಿಕರ 12 ತಿಂಗಳ ಸರಾಸರಿಯನ್ನು ಆಧರಿಸಿದೆ ಎಂದು ಸಚಿವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜುಲೈ 1, 2024ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ ಕಂತಿನ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರ (ಡಿಆರ್) ನೀಡಲು ಅನುಮೋದನೆ ನೀಡಿದೆ. ಇದು ಪ್ರಸ್ತುತ ಮೂಲ ವೇತನ/ಪಿಂಚಣಿಯ ಶೇಕಡಾ 50ರ ದರಕ್ಕಿಂತ ಶೇಕಡಾ 3ರಷ್ಟು (3%) ಹೆಚ್ಚಳವಾಗಿದೆ. ಬೆಲೆ ಏರಿಕೆಯನ್ನು ಸರಿದೂಗಿಸಲು ಈ ಹೆಚ್ಚಳ ಅನುಕೂಲವಾಗಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಈ ಹೆಚ್ಚಳವು 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಸ್ವೀಕಾರಾರ್ಹ ಸೂತ್ರಕ್ಕೆ ಅನುಗುಣವಾಗಿದೆ. ಡಿಎ ಮತ್ತು ಡಿಆರ್ ಎರಡರಿಂದಲೂ ಬೊಕ್ಕಸಕ್ಕೆ ವಾರ್ಷಿಕ 9,448.35 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದ್ದು, ಸುಮಾರು 49.18 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 64.89 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.
ಇದನ್ನೂ ಓದಿ:PUC ಆದವರಿಗೆ ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ: ಮೊದಲ ತಿಂಗಳಿಂದಲೇ 40 ಸಾವಿರ ಸಂಬಳ, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಯಾವಾಗ?