ಪ್ಯಾಂಟ್, ಬನಿಯನ್ಗೆ ಚಿನ್ನದ ಪೇಸ್ಟ್ ಅಂಟಿಸಿ ಸಾಗಾಟ ನಾಗ್ಪುರ (ಮಹಾರಾಷ್ಟ್ರ):ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಚಿನ್ನ, ದುಬಾರಿ ಫೋನ್, ವಾಚ್ಗಳ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕನೋರ್ವನನ್ನು ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಈ ಚಾಲಾಕಿ ಖದೀಮನೋರ್ವ ಪ್ಯಾಂಟ್, ಬನಿಯನ್ಗಳಲ್ಲಿ ಚಿನ್ನದ ಪೇಸ್ಟ್ಅನ್ನು ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ. ಬಂಧಿತನಿಂದ ಒಟ್ಟಾರೆ 1.37 ಕೋಟಿ ರೂಪಾಯಿ ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಹಮ್ಮದ್ ಮೊಗರ್ ಅಬ್ಬಾಸ್ ಎಂಬಾತನೇ ಬಂಧಿತ ಪ್ರಯಾಣಿಕ ಎಂದು ಗುರುತಿಸಲಾಗಿದೆ. ಈತ ಶಾರ್ಜಾದಿಂದ ಇಲ್ಲಿನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈ ವೇಳೆ, ಈತನ ಚಲನವಲನಗಳು ಅನುಮಾನಾಸ್ಪದವಾಗಿ ಕಂಡುಬಂದಿದ್ದರಿಂದ ವಾಯು ಗುಪ್ತಚರ ಘಟಕ, ವಾಯು ಕಸ್ಟಮ್ಸ್ ಘಟಕದ ಅಧಿಕಾರಿಗಳು ತಡೆದು ವಿಚಾರಣೆ ನಡೆಸಿದ್ದಾರೆ. ಇದರಿಂದ ಚಿನ್ನದ ಕಳ್ಳಸಾಗಣೆಯ ಹೊಸ ತಂತ್ರ ಬಯಲಿಗೆ ಬಂದಿದೆ.
ಕಸ್ಟಮ್ಸ್ ಇಲಾಖೆಯ ಆಯುಕ್ತ ಸಂಜಯ್ ಕುಮಾರ್ ಮತ್ತು ಹೆಚ್ಚುವರಿ ಆಯುಕ್ತ ಪಿಯೂಷ್ ಭಾಟಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಏರ್ ಅರೇಬಿಯಾ ಫ್ಲೈಟ್ ನಂ.ಜಿ9-415 ವಿಮಾನದ ಮೂಲಕ ಆರೋಪಿ ನಾಗ್ಪುರಕ್ಕೆ ಆಗಮಿಸಿದ್ದ. ಯಾರಿಗೂ ಅನುಮಾನ ಬಾರದಂತೆ ಪ್ಯಾಂಟ್, ವೆಸ್ಟ್ ಒಳಗೆ ಚಿನ್ನದ ಪೇಸ್ಟ್ ಅಂಟಿಸಿದ್ದ. ಅಂದಾಜು 822 ಗ್ರಾಂ ಚಿನ್ನದ ಪೇಸ್ಟ್ಅನ್ನು ವಶಪಡಿಸಿಕೊಳ್ಳಲಾಗಿದೆ.
ಅಷ್ಟೇ ಅಲ್ಲ, ಐದು ಐಫೋನ್, ಏಳು ದುಬಾರಿ ವಾಚ್‌ಗಳು ಮತ್ತು ಎಂಟು ಕೆಜಿ ಕೇಸರಿ ಸಹ ಆರೋಪಿ ಬಳಿ ಪತ್ತೆಯಾಗಿದೆ. 822 ಗ್ರಾಂ ಚಿನ್ನದ ಮೌಲ್ಯವು 50.75 ಲಕ್ಷ ರೂ. ಆಗಿದೆ. ಐದು ಐಫೋನ್ 15 ಪ್ರೊ ಮ್ಯಾಕ್ಸ್ ಬೆಲೆಯು 5.92 ಲಕ್ಷ, ಆ್ಯಪಲ್ ಫೋನ್ ದರ 3 ಲಕ್ಷ ರೂ. ಆಗಿದ್ದು, ಸ್ಮಾರ್ಟ್ ವಾಚ್‌ಗಳು ಮತ್ತು ಎಂಟು ಕೆಜಿ ಕೇಸರಿ ಮೌಲ್ಯವು 77.28 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಗಾಲಿಕುರ್ಚಿ ಕೊರತೆ, ನಡೆದು ಹೋಗುವಾಗ ಹೃದಯಾಘಾತದಿಂದ 80ರ ವೃದ್ಧ ಸಾವು: ಏರ್ ಇಂಡಿಯಾಗೆ ನೋಟಿಸ್