ಜಮ್ಮು: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿ ವಿಜಯ ಸಾಧಿಸಿದೆ. ಇದೀಗ ಇದರ ಬೆನ್ನಲ್ಲೇ ಟಿಕೆಟ್ ಹಂಚಿಕೆ ವಿಚಾರವಾಗಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ತೊರೆದಿದ್ದ ನಾಲ್ವರು ಸ್ವತಂತ್ರ ಶಾಸಕರು, ಎನ್- ಕಾಂಗ್ರೆಸ್ ಅಮೋಘ ಗೆಲುವಿನ ನಂತರ ಮತ್ತೆ ಪಕ್ಷಕ್ಕೆ ಸೇರಿಕೊಳ್ಳುವ ನಿರ್ಧಾರ ಮಾಡಿದ್ದಾರೆ.
90 ಸದಸ್ಯ ಬಲದ ವಿಧಾನಸಭೆಯಲ್ಲಿ 42 ಸ್ಥಾನಗಳನ್ನು ಗೆಲ್ಲುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮ್ಯಾಜಿಕ್ ನಂಬರ್ 4 ಸ್ಥಾನಗಳಷ್ಟೇ ಹಿಂದಿದೆ. ಇದೀಗ ನಾಲ್ವರು ಶಾಸಕರು 'ಘರ್ ವಾಪ್ಸಿ' ಆದರೆ, ಸರ್ಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್ ನಂಬರ್ ಫಾರೂಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ಸಿಗಲಿದೆ.
ಮಾತೃ ಪಕ್ಷಕ್ಕೆ ಮರಳಲು ಸ್ವತಂತ್ರ ಶಾಸಕರ ನಿರ್ಧಾರ:ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಏಳು ಸ್ವತಂತ್ರ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಅವರಲ್ಲಿ ಬಾನಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ರಾಮೇಶ್ವರ್ ಸಿಂಗ್, ಸುರನಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಚೌಧರಿ ಮೊಹಮ್ಮದ್ ಅಕ್ರಮ್, ಇಂದರ್ವಾಲ್ ವಿಧಾನಸಭಾ ಕ್ಷೇತ್ರದ ಶಾಸಕ ಪಯಾರೆ ಲಾಲ್ ಶರ್ಮಾ ಹಾಗೂ ರಾಜೌರಿಯ ತನ್ನಮಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಮಾಜಿ ನ್ಯಾಯಾಧೀಶ ಮುಜಾಫರ್ ಇಕ್ಬಾಲ್ ಖಾನ್ ಅವರು 'ಘರ್ ವಾಪ್ಸಿ' ಆಗಲು ನಿರ್ಧಾರ ಕೈಗೊಂಡಿದ್ದಾರೆ.
"ಚುನಾವಣೆಗೂ ಮುನ್ನ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಭಾಗವಾಗಿದ್ದ ನಾಲ್ವರು ಸ್ವತಂತ್ರ ಶಾಸಕರು, ಪಕ್ಷದ ನಾಯಕರ ಜೊತೆಗೆ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಮತ್ತೆ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ" ಎಂದು ಎನ್‌ಸಿ ನಾಯಕರೊಬ್ಬರು ತಿಳಿಸಿದ್ದಾರೆ.