ಕರ್ನಾಟಕ

karnataka

ETV Bharat / bharat

ಗೌರಿ ಹತ್ಯೆ ಆರೋಪಿ ಪಂಗರ್ಕರ್​ಗೆ ಪಕ್ಷದ ಯಾವುದೇ ಹುದ್ದೆ ನೀಡಲ್ಲ: ಶಿಂಧೆ ಶಿವಸೇನಾ ಸ್ಪಷ್ಟನೆ

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗೆ ಪಕ್ಷದಲ್ಲಿ ಯಾವುದೇ ಪದಾಧಿಕಾರಿ ಹುದ್ದೆ ನೀಡುವುದಿಲ್ಲ ಎಂದು ಶಿಂದೆ ನೇತೃತ್ವದ ಶಿವಸೇನೆ ಹೇಳಿದೆ.

By PTI

Published : 9 hours ago

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ಮುಂಬೈ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗರ್ಕರ್ ಅವರನ್ನು ಜಾಲ್ನಾ ಜಿಲ್ಲೆಯಲ್ಲಿ ಪಕ್ಷದ ಯಾವುದೇ ಪದಾಧಿಕಾರಿ ಹುದ್ದೆಗೆ ನೇಮಕ ಮಾಡದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಿರ್ಬಂಧ ವಿಧಿಸಿದೆ. ಪಂಗರ್ಕರ್ ಶುಕ್ರವಾರ ಪಕ್ಷದ ಮುಖಂಡ ಮತ್ತು ಮಾಜಿ ರಾಜ್ಯ ಸಚಿವ ಅರ್ಜುನ್ ಖೋಟ್ಕರ್ ಅವರ ಸಮ್ಮುಖದಲ್ಲಿ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದ್ದಾರೆ. ನವೆಂಬರ್​ನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರು ಶಿವಸೇನೆ ಸೇರಿದ್ದು ಗಮನಾರ್ಹ.

ಮಾಜಿ ಶಿವಸೈನಿಕ ಪಂಗರ್ಕರ್ ಪಕ್ಷಕ್ಕೆ ಮರಳಿದ್ದಾರೆ ಮತ್ತು ಜಾಲ್ನಾ ವಿಧಾನಸಭಾ ಚುನಾವಣಾ ಪ್ರಚಾರದ ಮುಖ್ಯಸ್ಥರಾಗಿ ನಾಮನಿರ್ದೇಶನಗೊಂಡಿದ್ದಾರೆ ಎಂದು ಖೋಟ್ಕರ್ ಈ ಹಿಂದೆ ಹೇಳಿದ್ದರು. ಆದರೆ ಈ ನಿರ್ಧಾರವನ್ನು ಬದಲಿಸಿರುವ ಶಿವಸೇನೆ, ಜಾಲ್ನಾ ಜಿಲ್ಲೆಯಲ್ಲಿ ಪಂಗರ್ಕರ್ ಅವರಿಗೆ ಪಕ್ಷದ ಯಾವುದೇ ಹುದ್ದೆ ನೀಡಿದ್ದರೆ ಆ ನಿರ್ಧಾರವನ್ನು ತಡೆಹಿಡಿಯಲಾಗಿದೆ ಎಂದು ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.

2001 ಮತ್ತು 2006 ರ ನಡುವೆ ಅವಿಭಜಿತ ಶಿವಸೇನೆಯಿಂದ ಜಾಲ್ನಾ ಪುರಸಭೆಯ ಕೌನ್ಸಿಲರ್ ಆಗಿದ್ದ ಪಂಗರ್ಕರ್ ಅವರನ್ನು ಆಗಸ್ಟ್ 2018 ರಲ್ಲಿ ಬಂಧಿಸಲಾಗಿತ್ತು. ಈ ವರ್ಷದ ಸೆಪ್ಟೆಂಬರ್ 4 ರಂದು ಕರ್ನಾಟಕ ಹೈಕೋರ್ಟ್ ಅವರಿಗೆ ಜಾಮೀನು ನೀಡಿದೆ. 2011 ರಲ್ಲಿ ಪಂಗರ್ಕರ್ ಅವರಿಗೆ ಶಿವಸೇನೆ ಟಿಕೆಟ್ ನಿರಾಕರಿಸಿದ ನಂತರ, ಅವರು ಬಲಪಂಥೀಯ ಹಿಂದೂ ಜನಜಾಗೃತಿ ಸಮಿತಿಗೆ ಸೇರಿದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನವೆಂಬರ್ 20 ರಂದು ನಡೆಯಲಿದ್ದು, ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.

ಪಂಗರ್ಕರ್ ಜಾಲ್ನಾದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಿದ್ದಾರೆ ಎಂದು ಖೋಟ್ಕರ್ ಈ ಹಿಂದೆ ಹೇಳಿದ್ದರು. ಆದರೆ ಮಹಾಯುತಿಯಲ್ಲಿ (ಶಿವಸೇನೆ, ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಒಳಗೊಂಡ ಆಡಳಿತ ಮೈತ್ರಿಕೂಟ) ಸೀಟು ಹಂಚಿಕೆ ಚರ್ಚೆಗಳು ಇನ್ನೂ ಅಂತಿಮವಾಗಿಲ್ಲ ಎಂದು ಅವರು ತಿಳಿಸಿದ್ದರು. ಸದ್ಯ ಈ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಕೈಲಾಶ್ ಗೋರಂಟ್ಯಾಲ್ ಶಾಸಕರಾಗಿದ್ದಾರೆ.

2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ಅವರ ಮನೆಯ ಹೊರಗಡೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಶ್ರೀಕಾಂತ್ ಪಂಗರ್ಕರ್ ಕೂಡ ಓರ್ವ ಆರೋಪಿಯಾಗಿದ್ದಾರೆ. ಮಹಾರಾಷ್ಟ್ರ ಪೊಲೀಸರ ನೆರವಿನಿಂದ ಕರ್ನಾಟಕ ಪೊಲೀಸರು ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಹಲವಾರು ಆರೋಪಿಗಳನ್ನು ಬಂಧಿಸಿದ್ದರು.

ಇದನ್ನೂ ಓದಿ : ಚೆನ್ನೈನ 59 ಕೆರೆಗಳು ಸಂಪೂರ್ಣ ಭರ್ತಿ: ಅಂತರ್ಜಲ ಮಟ್ಟವೂ ಹೆಚ್ಚಳ

ABOUT THE AUTHOR

...view details