ರಾಂಚಿ (ಜಾರ್ಖಂಡ್):ರಾಂಚಿಯಲ್ಲಿ ಸಂಚಲನಾತ್ಮಕ ಗ್ಯಾಂಗ್ರೇಪ್ ಕೇಸ್ ಬೆಳಕಿಗೆ ಬಂದಿದೆ. ಇಬ್ಬರು ಸಹೋದರಿಯರ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆರೋಪಿಗಳಲ್ಲಿ ಇಬ್ಬರು ಅಪ್ತಾಪ್ತರು ಎಂಬುದು ವಿಚಿತ್ರ ಸಂಗತಿ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಜಿಲ್ಲೆಯ ಮಂದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪ್ರಕರಣದ ವಿವರ:ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನ ಅಪ್ರಾಪ್ತ ಮಕ್ಕಳಿಬ್ಬರು ಗುರುವಾರ (ಏಪ್ರಿಲ್ 18) ಚಾನ್ಹೋದಲ್ಲಿ ನಡೆದ ಜಾತ್ರೆಗೆ ಹೋಗಿದ್ದರು. ವಾಪಸ್ ಬರುವಾಗ ಮಕ್ಕಳ ಜೊತೆಯಲ್ಲಿ ಪರಿಚಯಸ್ಥ ಆರೋಪಿಗಳೂ ಬಂದಿದ್ದಾರೆ. ದಾರಿ ಮಧ್ಯೆ ನಮ್ಮ ಮಕ್ಕಳನ್ನು ಹೆದರಿಸಿ ಅರಣ್ಯ ಪ್ರದೇಶದಲ್ಲಿನ ಪಾಳು ಮನೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಸ್ವಲ್ಪ ಸಮಯದ ನಂತರ, ಆರೋಪಿಗಳಲ್ಲಿ ಒಬ್ಬ ತನ್ನ ಇನ್ನೊಬ್ಬ ಗೆಳೆಯನನ್ನು ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾನೆ. ಆತ ಸ್ಥಳಕ್ಕೆ ಬಂದ ಮೇಲೆ ಮತ್ತೆ ಪೈಶಾಚಿಕ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕುಟುಂಬಸ್ಥರಿಂದ ಹುಡುಕಾಟ:ಗುರುವಾರ ತಡರಾತ್ರಿಯವರೆಗೂ ಅಪ್ರಾಪ್ತೆಯರು ಮನೆಗೆ ಬಾರದೆ ಇದ್ದಾಗ, ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ. ಹೆಣ್ಣುಮಕ್ಕಳಿಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಸಾಕಷ್ಟು ಹುಡುಕಾಟದ ಬಳಿಕವೂ ಕುಟುಂಬಸ್ಥರಿಗೆ ಅವರು ಎಲ್ಲಿದ್ದಾರೆ ಎಂಬುದು ಪತ್ತೆಯಾಗಿರಲಿಲ್ಲ. ಇದೇ ವೇಳೆ, ಮಧ್ಯರಾತ್ರಿ ಅಪ್ರಾಪ್ತೆಯರಲ್ಲಿ ಒಬ್ಬಳು ಅತ್ಯಾಚಾರಿಗಳಿಂದ ಅದು ಹೇಗೋ ತಪ್ಪಿಸಿಕೊಂಡಿದ್ದಾಳೆ. ಮನೆಗೆ ಬಂದ ಬಾಲಕಿ ನಡೆದ ಘಟನೆಯ ಬಗ್ಗೆ ಕುಟುಂಬದ ಸದಸ್ಯರಿಗೆ ಸವಿವರವಾಗಿ ಹೇಳಿದ್ದಾರೆ.