ಹೈದರಾಬಾದ್: ಮದುವೆ ಎಂಬ ಪವಿತ್ರ ಬಂಧವನ್ನು ಹಣಗಳಿಸುವ ಅಸ್ತ್ರವಾಗಿಸಿಕೊಂಡ ವ್ಯಕ್ತಿಯೊಬ್ಬ, ಹಲವಾರು ಹೆಣ್ಣು ಮಕ್ಕಳನ್ನು ವಂಚಿಸಿದ ಘಟನೆ ತೆಲಂಗಾಣದಿಂದ ವರದಿಯಾಗಿದೆ. ವಿಶೇಷ ಮತ್ತು ವಿಚಿತ್ರ ಎಂದರೆ, ಆತ ಈ ಕೃತ್ಯದ ಜಾಲ ಬಯಲಾಗಬಾರದು ಎಂಬುದಕ್ಕೆ ಹಲವು ವಿಗ್ಗಳನ್ನು ಬಳಸಿಕೊಂಡು ತನ್ನ ನೋಟವನ್ನು ಮರೆಮಾಚುವ ಯತ್ನ ನಡೆಸಿದ್ದ. ಅಷ್ಟೇ ಅಲ್ಲ ತಾನು ಮದುವೆಗೆ ಅರ್ಹ ವರ ಎಂದು ಬಿಂಬಿಸಿಕೊಂಡು ಹೆಣ್ಣು ಮಕ್ಕಳಿದ್ದ ಕುಟುಂಬಗಳನ್ನು ಗುರಿಯಾಗಿಸಿಕೊಂಡು ವಂಚನೆ ಇಳಿಯುತ್ತಿದ್ದ.
ನಕಲಿ ಗಂಡಿನ ಅವತಾರ: ಕುಟುಂಬವೊಂದು ತಮ್ಮ ಒಬ್ಬಳೇ ಮಗಳಿಗೆ ಆನ್ಲೈನ್ ಮೂಲಕ ಗಂಡು ಪತ್ತೆ ಮಾಡುತ್ತಿದ್ದಾಹ ಈ ನಕಲಿ ಗಂಡಿನ ಮದುವೆ ವಂಚನೆ ಹಗರಣ ಬೆಳಕಿಗೆ ಬಂದಿದೆ. ಆನ್ಲೈನ್ ಮದುವೆ ತಾಣದಲ್ಲಿ ಈತನ ಪ್ರೊಫೈಲ್ ಮೆಚ್ಚಿದ ಕುಟುಂಬ ಮದುವೆಗೆ ಸಿದ್ಧತೆ ಕೂಡಾ ನಡೆಸಿತ್ತು. ವಧುವಿನ ಕುಟುಂಬದ ನಂಬಿಕೆ ಗಳಿಸಿದ ವರ ಆಭರಣ ಮತ್ತು ಮದುವೆ ಖರ್ಚಿಗಾಗಿ 25 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದ. ಅಲ್ಲದೇ ವಾಟ್ಸ್ಆ್ಯಪ್ ಮೂಲಕ ಆಭರಣದ ಚಿತ್ರವನ್ನು ಹಂಚಿಕೊಂಡು ಇವುಗಳನ್ನು ನೈಜ ಎಂಬಂತೆ ಬಿಂಬಿಸಿದ್ದ.
ದಿನಕಳೆದಂತೆ ವರನ ಕುರಿತು ಭಯಂಕರ ಸತ್ಯವೊಂದು ಹೊರ ಬಂದಿದ್ದು, ಕುಟುಂಬಸ್ಥರು ಆಘಾತಕ್ಕೆ ಒಳಗಾದರು. ವರ ಈಗಾಗಲೇ ಎರಡು ಮಕ್ಕಳ ತಂದೆಯಾಗಿದ್ದು, ಕ್ರಿಮಿನಲ್ ಹಿನ್ನೆಲೆ ಕೂಡ ಹೊಂದಿದ್ದ. ಇದನ್ನು ತಿಳಿದು ವಧುವಿನ ಕುಟುಂಬ ಮದುವೆ ರದ್ದು ಮಾಡಿ, ಹಣ ಹಿಂದಿರುಗಿಸುವಂತೆ ಕೋರಿದೆ. ಆದರೆ ವರ ಚೆಕ್ ನೀಡುವ ಮೂಲಕ ವಂಚನೆ ಮಾಡಿದ್ದಾನೆ.
ಅನೇಕ ವಿಗ್ಗಳ ಮೂಲಕ ಗುರುತು ಮೆರೆಮಾಚುತ್ತಿದ್ದ ವರ: ಈ ವರ ತನ್ನ ಈ ಕೃತ್ಯ ಹಾಗೂ ಗುರುತಿನ ಜೊತೆಗೆ ವಯಸ್ಸನ್ನು ಕೂಡಾ ಮರೆ ಮಾಚುತ್ತಿದ್ದ. ಯಾರಿಗೂ ಅನುಮಾನ ಬಾರದಂತೆ ಕಾಪಾಡಲು ಹಲವಾರು ವಿಗ್ಗಳನ್ನು ಬಳಕೆ ಮಾಡುತ್ತಿದ್ದ ಎಂಬ ಅಂಶವನ್ನು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಈತ ನಾನಾ ಹೆಸರಿನಲ್ಲಿ ತನ್ನ ಪ್ರೊಫೈಲ್ ನಿರ್ವಹಣೆ ಮಾಡುತ್ತಿದ್ದು, ಅನೇಕ ಸೆಲೆಬ್ರಿಟಿ, ರಾಜಕೀಯ ಮತ್ತು ಉದ್ಯಮಿಗಳ ಸಂಪರ್ಕಗಳು ಇರುವಂತೆ ಫೋಟೋದಲ್ಲಿ ಬಿಂಬಿಸಿಕೊಂಡಿದ್ದ, ಇದು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದು ಬಂದಿದೆ.