ಬೆಂಗಳೂರು/ಬೆಳಗಾವಿ: ಕೃಷ್ಣಾ ಮೇಲ್ದಂಡೆ ನದಿ ಪಾತ್ರದ ಆಲಮಟ್ಟಿ ಅಣೆಕಟ್ಟೆಯ ಎತ್ತರದಿಂದ ಮುಳುಗಡೆಯಾಗುವ 75 ಸಾವಿರ ಎಕರೆ ಜಮೀನಿನ ರೈತರಿಗೆ ಏಕರೂಪದಲ್ಲಿ ಪರಿಹಾರ ಪಾವತಿಸಲು ಮುಖ್ಯಮಂತ್ರಿಯವರು ನಿರ್ಣಯಿಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಸದನದಲ್ಲಿ ಇಂದು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ವಿಶೇಷ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಳುಗಡೆ ಪ್ರದೇಶಕ್ಕೆ ಎರಡು ಕಂತಿನಲ್ಲಿ ಪರಿಹಾರ ಪಾವತಿಸಲು ಈ ಸರ್ಕಾರ ನಿರ್ಣಯ ಕೈಗೊಂಡಿದೆ ಎಂದು ಹೇಳಿದರು. ಆಗ ಮಧ್ಯಪ್ರವೇಶಿಸಿದ ಸಚಿವರು, ಇದು ತಪ್ಪು ಕಲ್ಪನೆ. ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2 ಕಂತಿನ ಪರಿಹಾರ ಪಾವತಿಸುವ ನಿರ್ಣಯ ಕೈಗೊಂಡು ಆದೇಶವು ಜಾರಿಯಾಗಿದೆ. ಆದರೆ ನಮ್ಮ ಸರ್ಕಾರದಲ್ಲಿ ಅದರ ಮುಂದುವರೆದ ಸಂಪರ್ಕದ ಪತ್ರಗಳು ರವಾನೆಯಾಗಿವೆ. ಇದು ನಮ್ಮ ಸರ್ಕಾರ ಕೈಗೊಂಡ ನಿರ್ಣಯವಲ್ಲ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ಆಲಮಟ್ಟಿ ಎತ್ತರ ಸೇರಿದಂತೆ ಹಲವು ಕಾಮಗಾರಿಗಳಿಗೆ 1.50 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ ಎಂದು ಪದೇಪದೇ ಹೇಳುವ ಮೂಲಕ ಆ ಯೋಜನೆಯನ್ನು ಮುಟ್ಟಲು ಹೆದರುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ ಎಂದು ಸಚಿವರು ಆಕ್ಷೇಪಿಸಿದರು.
ಯೋಜನೆಗೆ ಅಷ್ಟೊಂದು ಹಣ ಬೇಕಾಗುವುದಿಲ್ಲ. ಸುಮಾರು 75 ಸಾವಿರ ಕೋಟಿ ರೂ. ವೆಚ್ಚದಲ್ಲೇ ಪೂರ್ಣಗೊಳಿಸಲು ಅವಕಾಶವಿದೆ. ತಾವು ಜಲ ಸಂಪನ್ಮೂಲ ಸಚಿವರಾಗಿದ್ದಾಗ 51 ಸಾವಿರ ಕೋಟಿ ರೂ.ಗಳಿಗೆ ಯೋಜನಾ ಮಂಜೂರಾತಿಯನ್ನು ನೀಡಿದ್ದೆ. 75 ಸಾವಿರ ಎಕರೆ ಭೂಸ್ವಾಧೀನಕ್ಕೆ 35 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. 20 ಹಳ್ಳಿಗಳ ಸ್ಥಳಾಂತರಕ್ಕೆ 12 ಸಾವಿರ ಕೋಟಿ, ಕೆಲವು ಕಾಲುವೆಗಳ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅದನ್ನು ಮುಂದುವರೆಸಲು ಹಾಗೂ ಭೂಸ್ವಾಧೀನ ಸೇರಿ 75 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಆದರೆ 1.50 ಲಕ್ಷ ಕೋಟಿ ರೂ. ಅಂತಾ ಹೇಳಿ ಆತಂಕ ಮೂಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಚರ್ಚೆ ಮುಂದುವರೆಸಿದ ಯತ್ನಾಳ್, ಕಾವೇರಿ ನದಿಯಷ್ಟೇ ಪ್ರಾಮುಖ್ಯತೆಯನ್ನು ಕೃಷ್ಣೆಗೂ ನೀಡಬೇಕು. ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷಗಳೂ ಕೂಡಲಸಂಗಮದಲ್ಲಿ ಆಣೆ ಪ್ರಮಾಣ ಮಾಡುತ್ತವೆ. ಆದರೆ ಯಾವ ಯೋಜನೆಗಳೂ ಈಡೇರುವುದಿಲ್ಲ. ಕಾವೇರಿಗಿಂತಲೂ ಕೃಷ್ಣೆ ಹೆಚ್ಚು ಅಚ್ಚುಕಟ್ಟು ಪ್ರದೇಶ ಹೊಂದಿದೆ. ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಜನ್ಮ ತಾಳಿ ಆಂಧ್ರಪ್ರದೇಶದವರೆಗೂ ಹರಿಯುತ್ತಿದೆ. ರಾಜ್ಯದಲ್ಲಿ 1,392 ಕಿ.ಮೀ. ಹರಿಯುತ್ತಿದೆ. 1,12,000 ಚ.ಕೀ. ಜಲಾನಯನ ಪ್ರದೇಶ ಹೊಂದಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಿದ ಚಳಿ ಗಾಳಿ: ಈ ಜಿಲ್ಲೆಗಳಿಗೆ ಕೋಲ್ಡ್ ವೇವ್ ಯೆಲ್ಲೋ ಅಲರ್ಟ್ ಘೋಷಣೆ