ನವದೆಹಲಿ: ಗೃಹ ಸಚಿವ ಅಮಿತ್ ಶಾ ಅವರು ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. "ಅಂಬೇಡ್ಕರ್ ಅವರ ಬಗ್ಗೆ ಕಾಂಗ್ರೆಸ್ ಹೊಂದಿರುವ ಧೋರಣೆಯನ್ನು ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಬಿಚ್ಚಿಟ್ಟಿದ್ದಾರೆ" ಎಂದಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್ ವಿರುದ್ಧ ಕಟುವಾಗಿ ಟೀಕಿಸಿರುವ ಪ್ರಧಾನಿ, "ಕಾಂಗ್ರೆಸ್ನ ಸತ್ಯ ಸಂಗತಿಗಳನ್ನು ಗೃಹ ಸಚಿವರು ಸದನದ ಮೂಲಕ ದೇಶಕ್ಕೆ ತಿಳಿಸಿದ್ದಾರೆ. ಇದರಿಂದ ದಿಗ್ಭ್ರಮೆಗೊಂಡಿರುವ ಆ ಪಕ್ಷವು ಅಮಿತ್ ಶಾ ವಿರುದ್ಧ ಸುಳ್ಳು ಮಾಹಿತಿಯನ್ನು ಹರಡುತ್ತಿದೆ" ಎಂದು ಟೀಕಿಸಿದ್ದಾರೆ.
"ಕಾಂಗ್ರೆಸ್ ಮತ್ತು ಅದರ ಕೊಳಕು ವ್ಯವಸ್ಥೆಯು ದುರುದ್ದೇಶಪೂರಿತ ಸುಳ್ಳುಗಳು, ಇತಿಹಾಸದ ದುಷ್ಕೃತ್ಯಗಳನ್ನು ಮರೆಮಾಡಲು ಯತ್ನಿಸುತ್ತಿದೆ. ಡಾ. ಅಂಬೇಡ್ಕರ್ ಅವರಿಗೆ ಆ ಪಕ್ಷವು ಮಾಡಿದ ಅವಮಾನ, ಎಸ್ಸಿ/ಎಸ್ಟಿ ಸಮುದಾಯವನ್ನು ತುಳಿಯುವ ಕುತಂತ್ರದಲ್ಲಿ ತೊಡಗಿದೆ" ಎಂದು ಆರೋಪಿಸಿದರು.
If the Congress and its rotten ecosystem think their malicious lies can hide their misdeeds of several years, especially their insult towards Dr. Ambedkar, they are gravely mistaken!
— Narendra Modi (@narendramodi) December 18, 2024
The people of India have seen time and again how one Party, led by one dynasty, has indulged in…
ಕಾಂಗ್ರೆಸ್ನ ಪಾಪಗಳಿವು: ದೇಶಕ್ಕೆ ಸಂವಿಧಾನ ನೀಡಿರುವ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಂಡಿತು ಎಂಬ ಬಗ್ಗೆ ವಿವರಣೆ ನೀಡಿರುವ ಪ್ರಧಾನಿ ಮೋದಿ, "ಸಂವಿಧಾನ ಶಿಲ್ಪಿ ವಿರುದ್ಧ ಜವಾಹರ್ಲಾಲ್ ನೆಹರೂ ಅವರು ಪ್ರಚಾರ ಮಾಡಿದರು. ಎರಡು ಬಾರಿ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಯಿತು. ಸೋಲಿಸುವುದು ನೆಹರೂ ಅವರ ಪ್ರತಿಷ್ಠೆಯಾಗಿತ್ತು. ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ದೇಶದ ಹೆಮ್ಮೆಯ ಪುತ್ರನ ಫೋಟೋವನ್ನು ಇಡಲು ಸಹ ಅವಕಾಶ ನೀಡಿರಲಿಲ್ಲ. ಇವೆಲ್ಲವೂ ಕಾಂಗ್ರೆಸ್ ಮಾಡಿದ ಪಾಪಗಳು" ಎಂದು ಕಟುವಾಗಿ ಜರಿದಿದ್ದಾರೆ.
"ದೇಶದಲ್ಲಿ ಅತ್ಯಧಿಕ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳನ್ನು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಇರಿಸಿದೆ. ಆ ಸಮುದಾಯಗಳನ್ನು ಸಬಲೀಕರಣಗೊಳಿಸಲು ಏನನ್ನೂ ಮಾಡಲಿಲ್ಲ. ಅವರ ಹೆಸರಿನಲ್ಲಿ ಅಧಿಕಾರ ಮಾತ್ರ ಅನುಭವಿಸಿತು ಎಂದು ಟೀಕಾ ಪ್ರಹಾರ ನಡೆಸಿದರು.
"ನಮ್ಮ ಸರ್ಕಾರ ಜಾರಿ ಮಾಡಿರುವ ಸ್ವಚ್ಛ ಭಾರತ್, ಪ್ರಧಾನಮಂತ್ರಿ ಆವಾಸ್ ಯೋಜನೆ, ಜಲ ಜೀವನ್ ಮಿಷನ್, ಉಜ್ವಲ ಯೋಜನೆ ಸೇರಿದಂತೆ ವಿವಿಧ ಯೋಜನೆಗಳು ಎಸ್ಸಿ, ಎಸ್ಟಿ ಸೇರಿದಂತೆ ಬಡವರ್ಗದ ಜನರಿಗೆ ತಲುಪಿವೆ. ಇಂದು ನಾವೆಲ್ಲರೂ ಏನಾಗಿದ್ದೇವೆಯೋ ಅದೆಲ್ಲವೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಕೊಡುಗೆಯಾಗಿದೆ" ಎಂದು ಬಣ್ಣಿಸಿದ್ದಾರೆ.
ಅಂಬೇಡ್ಕರ್ ನಿವಾಸ ಅಭಿವೃದ್ಧಿ: "ಕೇಂದ್ರ ಸರ್ಕಾರವು ಡಾ. ಅಂಬೇಡ್ಕರ್ ಅವರಿಗೆ ಸೇರಿದ ಐದು ಪ್ರಮುಖ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಶ್ರಮಿಸಿದೆ. ಸಂವಿಧಾನ ಶಿಲ್ಪಿಯ ಸಮಾಧಿ ಇರುವ ಚೈತ್ಯ ಭೂಮಿಗೆ ಇದ್ದ ಜಾಗದ ಸಮಸ್ಯೆಯನ್ನು ಪರಿಹರಿಸಲಾಗಿದೆ. ಅಂಬೇಡ್ಕರ್ ಅವರ ನಿವಾಸವಿದ್ದ ದೆಹಲಿಯ ಅಲಿಪುರ್ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಅವರ ನಿವಾಸವನ್ನು ಸರ್ಕಾರ ಸುಪರ್ದಿಗೆ ಪಡೆದುಕೊಂಡಿದೆ. ಇದು ನಾವು ಅವರಿಗೆ ನೀಡುವ ಗೌರವವಾಗಿದೆ" ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಶರದ್ ಪವಾರ್: ಮಹಾರಾಷ್ಟ್ರದ ದಾಳಿಂಬೆ ಉಡುಗೊರೆ