ನವದೆಹಲಿ:ದೆಹಲಿ ಮೆಟ್ರೋ ಕಾಮಗಾರಿಗೆ ತೀವ್ರ ವಿರೋಧದ ನಡುವೆಯೂ ಹಣ ಬಿಡುಗಡೆ ಮಾಡಿ ಧೈರ್ಯ ಮೆರೆದಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಭಾನುವಾರ ಮೆಟ್ರೋದಲ್ಲಿ ಪ್ರಯಾಣಿಸಿದರು. ಕರ್ನಾಟಕ ರಾಜ್ಯಸಭಾ ಸದಸ್ಯರೂ ಆಗಿರುವ ಅವರು, ದೆಹಲಿ ಮೆಟ್ರೋ ರೈಲು ನಿಗಮದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಮೆಟ್ರೋದಲ್ಲಿ ಸಂಚರಿಸಿದ ಚಿತ್ರಗಳನ್ನ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಬೇಕೆಂಬ ನನ್ನ ಆಸೆ ಈಡೇರಿದೆ. ಇದು ಹಲವು ವರ್ಷಗಳಿಂದ ಮೂಡಿದ್ದ ಬಯಕೆಯಾಗಿತ್ತು. ಅದು ಇಂದು ಈಡೇರಿದೆ. 1996 ರಲ್ಲಿ ನಾನು ಪ್ರಧಾನ ಮಂತ್ರಿಯಾಗಿದ್ದಾಗ ಸಚಿವ ಸಂಪುಟ ಮತ್ತು ರಾಜಕೀಯ ಪ್ರತಿರೋಧದ ನಡುವೆಯೂ ಯೋಜನೆಗೆ ಅನುದಾನ ಬಿಡುಗಡೆ ಮಾಡಿದ್ದೆ. ಇದರಿಂದ ದೆಹಲಿ ಮೆಟ್ರೋ ಜಾಲವೂ ಬೃಹತ್ತಾಗಿ ಬೆಳೆದುಕೊಂಡಿದೆ. ದೇವರು ನನಗೆ ಇದನ್ನು ಮಾಡಲು ಧೈರ್ಯ ನೀಡಿದ್ದಕ್ಕೆ ಸಂತೋಷವಾಗಿದೆ. ಇದು ಜನರಿಗೆ ನೆರವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
"ಲೋಕ್ ಕಲ್ಯಾಣ್ ಮಾರ್ಗ್ ನಿಲ್ದಾಣದಲ್ಲಿ ರೈಲು ಹತ್ತಿ ಒಂದಷ್ಟು ದೂರ ಸಾಗಿದೆ. ಪ್ರಯಾಣ ಆಹ್ಲಾದಕರ ಅನುಭವ ನೀಡಿತು. ನನ್ನ ಜೊತೆಗೆ ಡಿಎಂಆರ್‌ಸಿ ನಿರ್ದೇಶಕ ಮನೋಜ್ ಸಿಂಘಾಲ್ ಮತ್ತು ಇತರ ದೆಹಲಿ ಮೆಟ್ರೋ ಸಿಬ್ಬಂದಿ ಇದ್ದರು. ಎಲ್ಲ ಅಧಿಕಾರಿಗಳಿಗೆ ನನ್ನ ಧನ್ಯವಾದಗಳು" ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.
ದೆಹಲಿ ನಿವಾಸಿಗಳಿಗೆ ಮೆಟ್ರೋ ಜೀವನಾಡಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಡಿಸೆಂಬರ್ 24, 2002 ರಂದು ದೆಹಲಿ ಮೆಟ್ರೋದ ಮೊದಲ ಕಾರಿಡಾರ್ ಅನ್ನು ಉದ್ಘಾಟಿಸಿದ್ದರು. ವಾಜಪೇಯಿ ಅವರು ದೆಹಲಿ ಮೆಟ್ರೋದ ಮೊದಲ ಪ್ರಯಾಣಿಕರಾಗಿದ್ದರು.