ಹೈದರಾಬಾದ್: ಅಕ್ರಮ ಆಸ್ತಿಗಳಿಕೆ ಆರೋಪದಡಿ ಬಂಧಿತರಾಗಿದ್ದ ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಶಿವಬಾಲಕೃಷ್ಣ ಅವರ ಕಸ್ಟಡಿ ಅವಧಿ ಬುಧವಾರ ಮುಗಿದ ಹಿನ್ನೆಲೆ ಅವರನ್ನು ನ್ಯಾಯಾಲಯದ ಆದೇಶದ ಮೇರೆಗೆ ಎಸಿಬಿ ಅಧಿಕಾರಿಗಳು ಚಂಚಲಗೂಡ ಜೈಲಿಗೆ ಕಳುಹಿಸಿದ್ದಾರೆ. ಒಟ್ಟು 8 ದಿನಗಳಲ್ಲಿ ಎಸಿಬಿ ವಿವಿಧ ಕೋನಗಳಲ್ಲಿ ತನಿಖೆ ನಡೆಸಿದ್ದು, ಶಿವಬಾಲಕೃಷ್ಣ ಅವರ ಆದಾಯದ ದೊಡ್ಡ ಲಿಸ್ಟೇ ಬಯಲಾಗಿದೆ.
ಶಿವಬಾಲಕೃಷ್ಣ ಹಾಗೂ ಅವರ ಕುಟುಂಬದವರು ಹಾಗೂ ಬೇನಾಮಿ ಹೆಸರಿನಲ್ಲಿ 214 ಎಕರೆ ಕೃಷಿ ಭೂಮಿ, 29 ನಿವೇಶನಗಳು ಹಾಗೂ 8 ಮನೆಗಳು ಇರುವುದು ಈವರೆಗಿನ ತನಿಖೆಯಿಂದ ತಿಳಿದು ಬಂದಿದೆ ಎಂದು ಅಲ್ಲಿನ ಎಸಿಬಿ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಮೂರು ದಿನಗಳಿಂದ ಎಚ್‌ಎಂಡಿಎ ಕೇಂದ್ರ ಕಚೇರಿಯಲ್ಲಿ ಎಸಿಬಿ ತಪಾಸಣೆ ನಡೆಸಿ ವಶಪಡಿಸಿಕೊಂಡ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಶಿವಬಾಲಕೃಷ್ಣ ಅವರು ವಿವಿಧ ರಿಯಲ್ ಎಸ್ಟೇಟ್ ಕಂಪನಿಗಳಿಗೆ ನೀಡಿರುವ ಅನುಮತಿಗಳ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಸಿದ್ದಿಪೇಟೆ ಜಿಲ್ಲೆಯ ಅಲ್ಲಾಪುರ ಗ್ರಾಮದ ಶಿವಬಾಲಕೃಷ್ಣ ಒಟ್ಟು 214 ಎಕರೆ ಪೈಕಿ 102 ಎಕರೆಯನ್ನು ಜನಗಾಮ ಜಿಲ್ಲೆಯೊಂದರಲ್ಲೇ ಖರೀದಿಸಿರುವುದು ಗಮನಕ್ಕೆ ಬಂದಿದೆ. ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ 66 ಎಕರೆ, ನಾಗರಕರ್ನೂಲ್‌ನಲ್ಲಿ 39, ಸಿದ್ದಿಪೇಟೆಯಲ್ಲಿ ಏಳು ಹಾಗೂ ರಂಗಾರೆಡ್ಡಿ ಜಿಲ್ಲೆಯಲ್ಲಿ ಅರ್ಧ ಎಕರೆ ಜಮೀನು ಇರುವುದು ತನಿಖೆ ವೇಳೆ ಬಯಲಾಗಿದೆ. ರಂಗಾರೆಡ್ಡಿ ಜಿಲ್ಲೆಯಲ್ಲಿ 12, ಯಾದಾದ್ರಿಯಲ್ಲಿ 8, ಸಂಗಾರೆಡ್ಡಿಯಲ್ಲಿ 3, ವಿಶಾಖಪಟ್ಟಣ ಮತ್ತು ವಿಜಯನಗರಂ ಜಿಲ್ಲೆಗಳಲ್ಲಿ ತಲಾ 2 ಮತ್ತು ಮೇಡ್ಚಲ್ ಮತ್ತು ಮೇದಕ್ ಜಿಲ್ಲೆಗಳಲ್ಲಿ ತಲಾ ಒಂದರಂತೆ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಪುಪ್ಪಲಗುಡದಲ್ಲಿರುವ ವಿಲ್ಲಾ ಹೊರತುಪಡಿಸಿ, ಹೈದರಾಬಾದ್‌ನಲ್ಲಿ 4 ಮತ್ತು ರಂಗಾರೆಡ್ಡಿಯಲ್ಲಿ 3 ಐಷಾರಾಮಿ ಮನೆಗಳಿವೆ ಎಂದು ಎಸಿಬಿ ಹೇಳಿದೆ.