ಆಗ್ರಾ, ಉತ್ತರಪ್ರದೇಶ: ಮಾಜಿ ಫೆಮಿನಾ ಮಿಸ್ ಇಂಡಿಯಾ ವೆಸ್ಟ್ ಬೆಂಗಾಲ್ ಕಿರೀಟ ಮುಡಿಗೇರಿಸಿಕೊಂಡಿದ್ದ ಶಿವಂಕಿತಾ ದೀಕ್ಷಿತ್ ಡಿಜಿಟಲ್ ಅರೆಸ್ಟ್ಗೆ ಒಳಗಾಗಿದ್ದು 99,000 ರೂ. ವಂಚನೆಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ಸೈಬರ್ ಅಪರಾಧಿಗಳು, ಮನಿ ಲಾಂಡರಿಂಗ್ ಮತ್ತು ಮಕ್ಕಳಿಂದ ಹಣ ಸುಲಿಗೆ ಮಾಡಿದ ಆರೋಪ ನಿಮ್ಮ ಮೇಲೆ ಇದೆ ಎಂದು ಬಂಧಿಸಿದ್ದಾರೆ. ಇದಾದ ಮೇಲೆ ಎರಡು ಗಂಟೆಗಳ ಕಾಲ ಅವರನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ. ಈ ವೇಳೆ ಹಣ ವರ್ಗಾಯಿಸುವಂತೆ ಅವರಿಗೆ ಬೆದರಿಕೆ ಹಾಕಲಾಗಿದೆ. ಹಣ ನೀಡುತ್ತಿದ್ದಂತೆ ಕಾಲ್ ಕಟ್ ಆಗಿದೆ. ಅಷ್ಟರ ಬಳಿಕ ತಾನು ವಂಚನೆಗೆ ಒಳಗಾಗಿರುವುದು ದೀಕ್ಷಿತ್ಗೆ ಗೊತ್ತಾಗಿದ್ದು, ತಕ್ಷಣವೇ ಸೈಬರ್ ಘಟಕಕ್ಕೆ ದೂರು ನೀಡಿದ್ದಾರೆ.
ಹೇಗೆ ನಡೆಯಿತು ವಂಚನೆ?: ಸದ್ಯ ಮೇಕಪ್ ಅರ್ಟಿಸ್ಟ್ ಹಾಗೂ ಮಾಡೆಲ್ ಆಗಿರುವ ಶಿವಂಕಿತಾ ದೀಕ್ಷಿತ್ ಶಹಗಂಜ್ನ ಮಾನಸ್ ನಗರದ ವಾಸಿಯಾಗಿದ್ದಾರೆ. 2017ರಲ್ಲಿ ಫೆಮಿನಾ ಮಿಸ್ ಇಂಡಿಯಾ ವೆಸ್ಟ್ ಬೆಂಗಾಲ್ ಪಟ್ಟವನ್ನು ಅವರು ಮುಡಿಗೇರಿಸಿಕೊಂಡಿದ್ದರು.
ಮಂಗಳವಾರ ಸಂಜೆ 5ಗಂಟೆಗೆ ಅವರ ಮೊಬೈಲ್ಗೆ ವಾಟ್ಸ್ಆ್ಯಪ್ ಕರೆಯೊಂದು ಬಂದಿದೆ. ಅದನ್ನು ಸ್ವೀಕರಿಸಿದಾಗ ಆ ಬದಿಯವರು ತಮ್ಮನ್ನು ಸಿಬಿಐ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿಸಿದ್ದಾರೆ. ಆಕೆಯ ಆಧಾರ್ ಕಾರ್ಡ್‌ನೊಂದಿಗೆ ನೋಂದಾಯಿಸಲಾದ ಸಿಮ್‌ನಲ್ಲಿ ದೆಹಲಿಯ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗಿದೆ. ಇದರಲ್ಲಿ ಮನಿ ಲಾಂಡರಿಂಗ್ ಮೂಲಕ ಅಷ್ಟೇ ಅಲ್ಲದೇ 12ಕ್ಕೂ ಹೆಚ್ಚು ಮಕ್ಕಳನ್ನು ಅಪಹರಿಸಿ ಸುಲಿಗೆ ಹಣವನ್ನು ಠೇವಣಿ ಮಾಡಲಾಗಿದೆ ಎಂದಿದ್ದಾರೆ.
ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಪೋಸ್: ಸಿಬಿಐ ಅಧಿಕಾರಿಗಳ ಆರೋಪಕ್ಕೆ ಉತ್ತರಿಸಿದ ಶಿವಂಕಿತಾ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಈ ವೇಳೆ ಸಿಬಿಐ ಅಧಿಕಾರಿಗಳು ನಿಮ್ಮನ್ನು ಭೇಟಿಯಾಗಬೇಕು. ಸಹಕರಿಸಿ, ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು, ಇಲ್ಲವಾದಲ್ಲಿ ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇನ್ನು ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮಾಡಿದವರು ಖಾಕಿ ಯುನಿಫಾರ್ಮ್ನಲ್ಲಿದ್ದು, ನಿಮ್ಮ ಮನೆಯ ಸದಸ್ಯರಿಗೆ ಈ ಮಾಹಿತಿ ತಿಳಿಸಬೇಡಿ. ರೂಮ್ ಲಾಕ್ ಮಾಡಿ. ಯಾರೊಂದಿಗೂ ಮಾತನಾಡಬೇಡಿ ಎಂದು ಕೂಡ ಎಚ್ಚರಿಸಿದ್ದಾರೆ. ಇದಾದ ಬಳಿಕ ಅವರು ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದಾರೆ.
99 ಸಾವಿರ ರೂ ವರ್ಗಾವಣೆ:ಸೈಬರ್ ಅಧಿಕಾರಿಗಳು ಎಂಬಂತೆ ಬಿಂಬಿಸಿಕೊಂಡಿದ್ದ ವಂಚಕರು ನನ್ನನ್ನು ಎರಡು ಗಂಟೆಗಳ ಕಾಲ ರೂಂನಲ್ಲಿ ಬಂಧನಕ್ಕೆ ಒಳಪಡಿಸಿದ್ದಲ್ಲದೇ, ನನ್ನ ಬ್ಯಾಂಕ್ ಖಾತೆಯಿಂದ 99 ಸಾವಿರ ರೂ ವರ್ಗಾವಣೆಯನ್ನು ಮಾಡಿಕೊಂಡಿದ್ದಾರೆ. ಇದಾದ ಬಳಿಕ ಸಂಪರ್ಕ ಕಡಿತಗೊಂಡಿದೆ. ಘಟನೆ ನಂತರ ಕೋಣೆಯಿಂದ ಹೊರಬಂದು ಈ ಕುರಿತು ತಂದೆ ಸಂಜಯ್ ದೀಕ್ಷಿತ್ಗೆ ತಿಳಿಸಿದ್ದಾರೆ, ಆ ಬಳಿಕ ತಾವು ಸೈಬರ್ ವಂಚನೆಗೆ ಬಲಿಯಾಗಿರುವುದು ಅರಿವಿಗೆ ಬಂದಿದೆ. ತಕ್ಷಣಕ್ಕೆ ಅದೇ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ, ಅದು ಸ್ವಿಚ್ಡ್ ಆಫ್ ಅಂತಾ ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ 1930 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಬಳಿಕ ಸೈಬರ್ ಕ್ರೈಂಗೆ ಕೂಡ ಇಮೇಲ್ ಮೂಲಕ ದೂರು ಸಲ್ಲಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸೈಬರ್ ವಂಚನೆಯಿಂದ 2.8 ಕೋಟಿ ಲೂಟಿ: ಪೊಲೀಸರ ಸಹಾಯದಿಂದ 53 ಲಕ್ಷ ರೂ. ಮರಳಿ ಪಡೆದ ವ್ಯಕ್ತಿ