ನವದೆಹಲಿ:ಲೋಕಸಭಾ ಚುನಾವಣಾ ಹೊತ್ತಲ್ಲಿ ಕಾಂಗ್ರೆಸ್ಗೆ ಭಾರೀ ಹಿನ್ನಡೆ ಉಂಟಾಗಿದೆ. ಆಮ್ ಆದ್ಮಿ ಪಕ್ಷದ (ಆಪ್) ಜೊತೆಗೆ ಮೈತ್ರಿ ಮತ್ತು ಲೋಕಸಭಾ ಅಭ್ಯರ್ಥಿಗಳ ಆಯ್ಕೆಯ ವಿಚಾರವಾಗಿ ಮುನಿಸಿಕೊಂಡು ಪಕ್ಷದಿಂದ ಈಚೆಗೆ ಹೊರಬಂದಿದ್ದ ದೆಹಲಿ ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಅರವಿಂದ್ ಸಿಂಗ್ ಲವ್ಲಿ ಇಂದು (ಶನಿವಾರ) ಬಿಜೆಪಿ ಸೇರ್ಪಡೆಯಾದರು.
ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಲವ್ಲಿ ಜೊತೆಗೆ, ದೆಹಲಿ ಸರ್ಕಾರದ ಮಾಜಿ ಸಚಿವ ರಾಜ್ ಕುಮಾರ್ ಚೌಹಾಣ್, ಮಾಜಿ ಶಾಸಕ ನೀರಜ್ ಬಸೋಯಾ ಮತ್ತು ನಸೀಬ್ ಸಿಂಗ್ ಸೇರಿದಂತೆ ಕೆಲವು ನಾಯಕರು ಬಿಜೆಪಿ ಬಾವುಟ ಹಿಡಿದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಲವ್ಲಿ ಸಿಂಗ್, ಪಕ್ಷ ಸೇರಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರಿಗೆ ಧನ್ಯವಾದ ತಿಳಿಸಿದರು. ಆಮ್ ಆದ್ಮಿ ಪಕ್ಷದ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು ಸರಿಯಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸೀಟುಗಳನ್ನು ಗೆದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂದು ಹೇಳಿದರು.