ಕರ್ನಾಟಕ

karnataka

ಆಂಧ್ರದ ಮಾಜಿ ಸಿಎಂ ಜಗನ್, ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ - FIR Against Jagan

By ETV Bharat Karnataka Team

Published : Jul 12, 2024, 6:28 PM IST

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್​ಮೋಹನ್ ರೆಡ್ಡಿ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧದ ಗುಂಟೂರು ಜಿಲ್ಲೆಯಲ್ಲಿ ಕೇಸ್​ ದಾಖಲಾಗಿದೆ.

ಆಂಧ್ರ ಮಾಜಿ ಸಿಎಂ ಜಗನ್ ಎಫ್ಐಆರ್
ಆಂಧ್ರ ಮಾಜಿ ಸಿಎಂ ಜಗನ್ ಎಫ್ಐಆರ್ (ETV Bharat)

ಗುಂಟೂರು (ಆಂಧ್ರಪ್ರದೇಶ): ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್​ಮೋಹನ್ ರೆಡ್ಡಿ ವಿರುದ್ಧ ಕೊಲೆ ಯತ್ನದ ಆರೋಪದಡಿ ಎಫ್ಐಆರ್​ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಮಾಜಿ ಸಂಸದ, ಹಾಲಿ ಟಿಪಿಡಿ ಶಾಸಕ ರಘು ರಾಮ ಕೃಷ್ಣರಾಜು ದೂರಿನ ಮೇರೆಗೆ ಜಗನ್ ಸೇರಿದಂತೆ ಇತರರ ವಿರುದ್ಧ ಈ ಕೇಸ್​ ದಾಖಲಾಗಿದೆ.

ಗುಂಟೂರಿನ ನಗರಂಪಲೆಂ ಪೊಲೀಸ್ ಠಾಣೆಯಲ್ಲಿ ಜಗನ್ ಜೊತೆಗೆ ಐಪಿಎಸ್ ಅಧಿಕಾರಿ ಪಿ.ವಿ.ಸುನೀಲ್ ಕುಮಾರ್, ಮಾಜಿ ಗುಪ್ತಚರ ಮುಖ್ಯಸ್ಥ ಮತ್ತು ಐಪಿಎಸ್ ಅಧಿಕಾರಿ ಸೀತಾರಾಮಾಂಜನೇಯುಲು ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮೂವರ ವಿರುದ್ಧವೂ ಸೆಕ್ಷನ್ 120ಬಿ, 166, 167, 197, 307, 326, 465, 508 (34)ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಜಗನ್​ ಮೂರನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ, ವೈದ್ಯಾಧಿಕಾರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

2021ರ ಮೇ 14ರಂದು ಗುಂಟೂರಿನಲ್ಲಿ ತಮ್ಮನ್ನು ವಶಕ್ಕೆ ತೆಗೆದುಕೊಳ್ಳುವಾಗ ಥಳಿಸಿದ್ದು ಮಾತ್ರವಲ್ಲದೇ ಕೊಲೆಯ ಪ್ರಯತ್ನ ನಡೆದಿದೆ ಎಂದು ರಘು ರಾಮ ಕೃಷ್ಣರಾಜು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಜಗನ್ ವಿರುದ್ಧ ದಾಖಲಾಗಿರುವ ಮೊದಲ ಪ್ರಕರಣ ಇದಾಗಿದೆ. ಪಿ.ವಿ.ಸುನೀಲ್ ಕುಮಾರ್ ಈ ಹಿಂದೆ ಸಿಐಡಿ ಡಿಜಿಯಾಗಿ ಕಾರ್ಯನಿರ್ವಹಿಸಿದ್ದರು.

ಇತ್ತೀಚೆಗೆ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ, ಜನಸೇನಾ ಮತ್ತು ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ. ಟಿಡಿಪಿ ಮುಖ್ಯಸ್ಥರಾದ ಚಂದ್ರಬಾಬು ಮುಖ್ಯಮಂತ್ರಿಯಾಗಿದ್ಧಾರೆ.

ಇದನ್ನೂ ಓದಿ:'ಸೋಲು ಗೆಲುವು ಸಹಜ, ಸ್ಮೃತಿ ವಿರುದ್ಧ ಕೆಟ್ಟ ಪದ ಬಳಸದಿರಿ' ಬೆಂಬಲಿಗರಿಗೆ ರಾಹುಲ್ ಗಾಂಧಿ ಮನವಿ

ABOUT THE AUTHOR

...view details