ಬೆಂಗಳೂರು: ರಾಜ್ಯದ 28 ಕ್ಷೇತ್ರಗಳ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡಿದ್ದಾರೆ. ಇದರಲ್ಲಿ ಬಹುಪಾಲು ಪಕ್ಷೇತರ ಅಭ್ಯರ್ಥಿಗಳೇ ಅನ್ನೋದು ವಿಶೇಷ.
ಮಂಗಳವಾರ ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ವಿವಿಧ ಪಕ್ಷಗಳಲ್ಲಿ ಟಿಕೆಟ್ ಸಿಗದೆ ಬಂಡಾಯವೆದ್ದ ಅಭ್ಯರ್ಥಿಗಳು ಹಾಗೂ ಹಲವು ಸಣ್ಣಪುಟ್ಟ ಪಕ್ಷಗಳ ಅನೇಕರು ಕಣಕ್ಕಿಳಿದಿದ್ದರು. ಆದರೆ, ಎಲ್ಲ ಕ್ಷೇತ್ರಗಳಲ್ಲಿ ಪ್ರಬಲ ಪರಾಜಿತ ಅಭ್ಯರ್ಥಿಗಳೂ ಸೇರಿ ಕೇವಲ 56 ಮಂದಿ ಮಾತ್ರ ತಮ್ಮ ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
418 ಅಭ್ಯರ್ಥಿಗಳಿಗೆ ಸಿಗದ ಠೇವಣಿ:ರಾಜ್ಯಾದ್ಯಂತ ಚುನಾವಣಾ ಅಖಾಡದಲ್ಲಿದ್ದ ಒಟ್ಟಾರೆ ಅಭ್ಯರ್ಥಿಗಳ ಪೈಕಿ 418 ಅಭ್ಯರ್ಥಿಗಳಿಗೆ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಲ್ಲಿ 235 ಮಂದಿ ಸ್ವತಂತ್ರ ಅಭ್ಯರ್ಥಿಗಳಿದ್ದರೆ, ಇತರರು 138 ಸೇರಿದ್ದಾರೆ. ಈ ಮೂಲಕ ಶೇ.11.81ರಷ್ಟು ಅಭ್ಯರ್ಥಿಗಳು ಠೇವಣಿ ಪಡೆದಿದ್ದರೆ, ಶೇ.88.19ರಷ್ಟು ಅಭ್ಯರ್ಥಿಗಳ 'ಡೆಪಾಸಿಟ್ ಜಪ್ತಿ' ಆಗಿದೆ.
ಠೇವಣಿ ಕಳೆದುಕೊಳ್ಳುವುದು ಎಂದರೇನು?:ಜನಪ್ರತಿನಿಧಿ ಕಾಯ್ದೆ-1951ರ ಪ್ರಕಾರ, ಯಾವುದೇ ವ್ಯಕ್ತಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕಾದರೆ, ಚುನಾವಣಾ ಆಯೋಗದ ಬಳಿ ಹಣ ಠೇವಣಿ ಇಡಬೇಕು. ಸಾಮಾನ್ಯ ಅಭ್ಯರ್ಥಿಗಳಾದರೆ 25,000 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಾದರೆ 12,500 ರೂ.ಗಳ ನಗದು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್/ ಸರ್ಕಾರದ ಯಾವುದೇ ಖಜಾನೆ ಮೂಲಕ ಪಡೆದ ರಶೀದಿ ರೂಪದಲ್ಲೂ ನೀಡಬಹುದು.
ಠೇವಣಿ ಹಣ ಮರಳಿ ಸಿಗಬೇಕಾದರೆ ಚುನಾವಣೆಯಲ್ಲಿ ಚಲಾವಣೆಯಾದ ಅರ್ಹ ಮತಗಳಲ್ಲಿ 1/6ರಷ್ಟು ಮತಗಳನ್ನು ಪಡೆಯಬೇಕು. ಇಲ್ಲವಾದಲ್ಲಿ, ಅಂತಹ ಅಭ್ಯರ್ಥಿಯ ಠೇವಣಿ ಜಪ್ತಿ ಆಗುತ್ತದೆ. ಆ ಹಣ ಮರಳಿ ಸಿಗುವುದಿಲ್ಲ. ಚುನಾವಣೆಯ ಪ್ರಕ್ರಿಯೆಯಲ್ಲಿ ಅಭ್ಯರ್ಥಿಯ ಗಂಭೀರತೆಯನ್ನು ಅರಿತುಕೊಳ್ಳುವ ಸಲುವಾಗಿಯೇ ಠೇವಣಿಯನ್ನು ಕಡ್ಡಾಯಗೊಳಿಸಲಾಗಿದೆ.
ಠೇವಣಿ ವಾಪಸ್ ಯಾವಾಗ?: ಅಭ್ಯರ್ಥಿಗೆ ತನ್ನ ಠೇವಣಿ ಹಣ ಸಿಗುವ ಅವಕಾಶವನ್ನೂ ಕಲ್ಪಿಸಲಾಗಿದೆ. ಆದರೆ, ಅದಕ್ಕೂ ನಿರ್ದಿಷ್ಟ ಮಾನದಂಡಗಳಿವೆ. ಸ್ಪರ್ಧಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಮರೆಯಾದಾಗ, ಚುನಾವಣಾ ಆಯೋಗದಿಂದ ನಾಮಪತ್ರ ತಿರಸ್ಕೃತಗೊಂಡಾಗ ಅಥವಾ ನಾಮಪತ್ರ ವಾಪಸ್ ಪಡೆದಾಗ ಠೇವಣಿ ಹಣ ಮರಳಿಸಲಾಗುತ್ತದೆ. ಇದಲ್ಲದೇ, ಯಾವುದೇ ಅಭ್ಯರ್ಥಿಯು ಮತದಾನಕ್ಕಿಂತ ಮೊದಲ ಮೃತಪಟ್ಟಾಗ, ಚುನಾವಣೆಯಲ್ಲಿ ಗೆದ್ದಾಗ, ಚಲಾವಣೆಯಾದ ಅರ್ಹ ಮತಗಳಲ್ಲಿ 1/6ರಷ್ಟು ಮತಗಳ ಪಡೆದಾಗ ಮಾತ್ರ ಠೇವಣಿ ಹಣ ಮರಳಿ ಸಿಗುತ್ತದೆ.
ಇದನ್ನೂ ಓದಿ:ಕರ್ನಾಟಕದಿಂದ 20 ಮಂದಿ ಹೊಸ ಸಂಸದರು ಆಯ್ಕೆ! ಮೊದಲ ಬಾರಿಗೆ ಸಂಸತ್ ಪ್ರವೇಶಿಸುವವರು ಇವರೇ