ನವದೆಹಲಿ: 17ನೇ ಲೋಕಸಭೆಯ ಐದು ವರ್ಷಗಳು ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ಅವಧಿಯಾಗಿದೆ. ದೇಶವು ದೊಡ್ಡ ಬದಲಾವಣೆಗಳ ಮೂಲಕ ವೇಗವಾಗಿ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ಲೋಕಸಭೆಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳು ದೇಶಕ್ಕೆ ಗೇಮ್ ಚೇಂಜರ್ ಆಗಿವೆ. ಇದರಲ್ಲಿ 21ನೇ ಶತಮಾನದ ಭಾರತದ ಬಲವಾದ ಅಡಿಪಾಯವನ್ನು ಕಾಣಬಹುದು ಎಂದರು.
ದೇಶವು ತ್ವರಿತ ಗತಿಯಲ್ಲಿ ದೊಡ್ಡ ಬದಲಾವಣೆಗಳತ್ತ ಸಾಗಿದೆ. ಸದನದ ಎಲ್ಲ ಸದಸ್ಯರು ಮಹತ್ವದ ಕೊಡುಗೆ ನೀಡಿದ್ದಾರೆ. ಜನರು ಶತಮಾನಗಳಿಂದ ಕಾಯುತ್ತಿದ್ದ ಕೆಲಸಗಳು ಪೂರ್ಣಗೊಂಡಿವೆ. ತಲೆಮಾರುಗಳಿಂದ ಜನರು ಒಂದೇ ಸಂವಿಧಾನದ ಕನಸು ಕಂಡಿದ್ದರು. ಈ ಸದನವು 370ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಅದನ್ನು ಸಾಧ್ಯವಾಗಿಸಿದೆ ಎಂದು ತಿಳಿಸಿದರು. ಜೊತೆಗೆ ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರ ಮತ್ತು ತ್ರಿವಳಿ ತಲಾಖ್ ರದ್ದು ಮಾಡಿರುವ ಬಗ್ಗೆಯೂ ಮೋದಿ ಉಲ್ಲೇಖಿಸಿದರು.
17ನೇ ಲೋಕಸಭೆಯಲ್ಲಿ ಇಂತಹ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ಐದು ವರ್ಷಗಳು ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ ಅವಧಿಯಾಗಿದೆ. ನಾವು ಈ ಮೂರನ್ನು ಒಟ್ಟಿಗೆ ನೋಡುವುದು ಅಪರೂಪ. ದೇಶವು 17ನೇ ಲೋಕಸಭೆಯನ್ನು ಆಶೀರ್ವದಿಸುತ್ತಲೇ ಇರುತ್ತದೆ ಎಂದರು.
ಇದೇ ವೇಳೆ, ಸ್ಪೀಕರ್ ಓಂ ಬಿರ್ಲಾ, ಸಂಸದರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ, ಏನೇ ಘಟಿಸಿದರೂ ನಿಮ್ಮ ಮುಖದಲ್ಲಿ ಯಾವಾಗಲೂ ನಗು ಇರುತ್ತದೆ. ನೀವು ಈ ಸದನವನ್ನು ನಿಷ್ಪಕ್ಷಪಾತವಾಗಿ ಮುನ್ನಡೆಸಿದ್ದೀರಿ. ಅದಕ್ಕಾಗಿ ನಾನು ನಿಮ್ಮನ್ನು ಶ್ಲಾಘಿಸುತ್ತೇನೆ. ಸಿಟ್ಟು ಮತ್ತು ಆರೋಪಗಳ ಸಂದರ್ಭಗಳನ್ನು ತಾಳ್ಮೆಯಿಂದ ನಿಭಾಯಿಸಿ ಸದನವನ್ನು ನಡೆಸಿದ್ದೀರಿ ಎಂದು ಬಿರ್ಲಾ ಅವರನ್ನು ಶ್ಲಾಘಿಸಿದರು.
ಕೋವಿಡ್ ಬಗ್ಗೆ ಉಲ್ಲೇಖಿಸಿದ ಮೋದಿ, ಕಳೆದ ಐದು ವರ್ಷಗಳಲ್ಲಿ ಶತಮಾನದ ಅತಿದೊಡ್ಡ ಬಿಕ್ಕಟ್ಟು ಎದುರಾಗಿತ್ತು. ಬಿರ್ಲಾ ಅವರು ಸದನದ ಘನತೆಯನ್ನು ಖಾತ್ರಿಪಡಿಸುವಾಗ ಸಂಸದೀಯ ಕಾರ್ಯಗಳಿಗೆ ಅಡ್ಡಿಯಾಗದಂತೆ ವ್ಯವಸ್ಥೆ ಮಾಡಿದರು. ಹಿಂದಿನ ಕಾಲದಲ್ಲಿ ಹೊಸ ಕಟ್ಟಡದ ಅಗತ್ಯತೆಯ ಬಗ್ಗೆ ಮಾತನಾಡಲಾಗುತ್ತಿತ್ತು. ಸ್ಪೀಕರ್ ನಿರ್ಧಾರವು 17ನೇ ಲೋಕಸಭೆಯ ಸಮಯದಲ್ಲಿ ಇದನ್ನು ಪೂರ್ಣಗೊಳಿಸಿತು. ಸದನದಲ್ಲಿ ಸ್ಪೀಕರ್ ನೇತೃತ್ವದಲ್ಲಿ ಸೆಂಗೋಲ್ ಪ್ರತಿಷ್ಠಾಪನೆ ಮಾಡಲಾಯಿತು ಎಂದೂ ಹೇಳಿದರು.
ಇದೇ ವೇಳೆ, ರಾಮ ಮಂದಿರದ ಕುರಿತ ಚರ್ಚೆಗೆ ಬಗ್ಗೆ ಲೋಕಸಭೆಯ ಕೈಗೊಂಡ ನಿರ್ಣಯವು ಭವಿಷ್ಯದ ಪೀಳಿಗೆಗೆ ದೇಶದ ಮೌಲ್ಯಗಳ ಬಗ್ಗೆ ಹೆಮ್ಮೆಪಡಲು ಸಾಂವಿಧಾನಿಕ ಶಕ್ತಿ ನೀಡುತ್ತದೆ. 17ನೇ ಲೋಕಸಭೆಯು ಶೇ.97ರಷ್ಟು ಉತ್ಪಾದಕತೆಯನ್ನು ಕಂಡಿದೆ. 18ನೇ ಲೋಕಸಭೆಯಲ್ಲಿ ಉತ್ಪಾದಕತೆ ಶೇ.100ರಷ್ಟು ಮೀರಬೇಕೆಂದು ನಾವು ನಿರ್ಧರಿಸಬೇಕು ಎಂದು ಮೋದಿ ಕರೆ ನೀಡಿದರು.
ಇದನ್ನೂ ಓದಿ:ಲೋಕಸಭೆ ಚುನಾವಣೆಗೂ ಮೊದಲೇ ಸಿಎಎ ಜಾರಿ: ಕೇಂದ್ರ ಗೃಹ ಸಚಿವ ಅಮಿತ್ ಶಾ