ಅಮೃತ್ಸರ್(ಪಂಜಾಬ್): ಕೋಲ್ಕತ್ತಾದ ಆರ್ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಷ್ಟ್ರ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಈ ಕೆಸ್ ಮಾಸುವ ಮುನ್ನವೇ ಮತ್ತೊಂದು ಅದೇ ರೀತಿಯ ಹೀನ ಕೃತ್ಯ ಪಂಜಾಬ್ನಲ್ಲಿ ವರದಿಯಾಗಿದೆ. ಸೆಪ್ಟೆಂಬರ್ 2ರಂದು ಪಂಜಾಬ್ನಲ್ಲಿ ಮಹಿಳಾ ವೈದ್ಯೆಗೆ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಗುರು ನಾನಕ್ ಆಸ್ಪತ್ರೆಯ ರೆಸಿಡೆಂಟ್ ಮಹಿಳಾ ವೈದ್ಯೆ ಕರ್ತವ್ಯ ಮುಗಿಸಿ ಹಾಸ್ಟೆಲ್ಗೆ ಮರಳುವಾಗ ಮೋಟಾರ್ ಸೈಕಲ್ನಲ್ಲಿ ಬಂದ ಇಬ್ಬರು ಯುವಕರು ಆ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಘಟನೆ ಬಳಿಕ ಸಂತ್ರಸ್ತೆ, ಈ ವಿಚಾರವನ್ನು ತಮ್ಮ ವಾರ್ಡ್ ವೈದ್ಯರೊಂದಿಗೆ ಹಂಚಿಕೊಂಡಿದ್ದರು. ನಂತರ ಕಾಲೇಜಿನ ಪ್ರಿನ್ಸಿಪಾಲ್ ಕಚೇರಿಗೂ ದೂರು ನೀಡಿದ್ದಾರೆ. ಈ ಸಂಬಂಧ ಪ್ರಾಂಶುಪಾಲರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಕೇಸ್ ಕುರಿತು ಹೇಳಿದ್ದು ಹೀಗೆ; ಈ ಪ್ರಕರಣ ಕುರಿತು ಮಾತನಾಡಿರುವ ಪೊಲೀಸ್ ಅಧಿಕಾರಿ ಹರ್ಮಜಿತ್ ಸಿಂಗ್ ಬಲ್, ನವದೆಹಲಿ ಮೂಲದ ರೆಸಿಡೆಂಟ್ ವೈದ್ಯರು, ಸೆಪ್ಟೆಂಬರ್ 2ರಂದು ರಾತ್ರಿ 10 ರಿಂದ 10.30ರ ಸುಮಾರಿಗೆ ಹಾಸ್ಟೆಲ್ಗೆ ಹೋಗುವಾಗ ಈ ಘಟನೆ ನಡೆದಿದೆ. ಆಸ್ಪತ್ರೆ ಕಟ್ಟಡದ ಹಿಂಭಾಗದಲ್ಲಿ ಈ ಕೃತ್ಯ ನಡೆದಿದ್ದು, ಈ ವೇಳೆ ನಾವು ಅಲ್ಲೇ ಗಸ್ತಿನಲ್ಲಿದ್ದೆವು. ಆದರೆ, ಆಗ ಪ್ರಕರಣದ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ ಎಂದು ಹೇಳಿದ್ದಾರೆ.