ಇಟಾವಾ (ಉತ್ತರಪ್ರದೇಶ) :ಇತ್ತೀಚೆಗೆ ರೈಲು ಹಳಿ ತಪ್ಪುವ ಘಟನೆಗಳು ಹೆಚ್ಚುತ್ತಿವೆ. ರೈಲ್ವೆ ಇಲಾಖೆ ಮೇಲೆ ಭಾರೀ ಟೀಕೆಗಳು ಬರುತ್ತಿವೆ. ತೀವ್ರ ಕಟ್ಟೆಚ್ಚರ ವಹಿಸಲು ಇಲಾಖೆಯು ಸೂಚಿಸಿದ್ದರೂ, ಸಿಬ್ಬಂದಿ ನಿರ್ಲಕ್ಷ್ಯತನ ಮಾತ್ರ ಮುಂದುವರಿದಿದೆ. ನಾಲ್ವರು ಟ್ರಾಕ್ ಸಿಬ್ಬಂದಿ ಮಾಡುವ ಕೆಲಸ ಬಿಟ್ಟು ಹಳಿಯ ಮೇಲೆಯೇ ಮೊಬೈಲ್‌ನಲ್ಲಿ ಲುಡೋ ಗೇಮ್ ಆಡುತ್ತಾ ಕುಳಿತ ವಿಡಿಯೋ ಹೊರಬಿದ್ದಿದೆ.
ದೆಹಲಿ - ಹೌರಾ ರೈಲ್ವೆ ಮಾರ್ಗದ ನಿಲ್ದಾಣವೊಂದರ ತುಸು ದೂರದಲ್ಲಿ ಕುಳಿತ ನಾಲ್ವರು ಮಹಿಳಾ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ಲುಡೋ ಗೇಮ್ ಆಡಿದ್ದಾರೆ. ನಾಲ್ವರೂ ರೈಲ್ವೇ ಹಳಿ ಸುರಕ್ಷತೆ ಕೆಲಸ ಮಾಡಲು ಬಂದಿದ್ದರು. ಆದರೆ, ಮಾಡಬೇಕಾದ ಕೆಲಸ ಬಿಟ್ಟು ಹಳಿ ಮೇಲೆಯೇ ಹರಟೆ ಹೊಡೆಯುತ್ತಾ ಕುಳಿತಿದ್ದಾರೆ. ಇದನ್ನು ಯಾರೋ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇಟಾವಾ ರೈಲು ಜಂಕ್ಷನ್ನಿಂದ ತುಸು ದೂರದಲ್ಲಿ ಈ ನಾಲ್ವರು ಮಹಿಳಾ ಉದ್ಯೋಗಿಗಳು ಲುಡೋ ಗೇಮ್ ಆಡುತ್ತಾ ಕುಳಿತಿದ್ದಾಗ, ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ. ಕೆಲಸ ಬಿಟ್ಟು ಹಳಿಯ ಮೇಲೆ ಗೇಮ್ ಆಡುತ್ತಿದ್ದೀರಲ್ಲ ಎಂದಾಗ, ಸಿಬ್ಬಂದಿ ಉಡಾಫೆಯಿಂದಲೇ ವರ್ತಿಸಿದ್ದಾರೆ. ವಿಡಿಯೋ ಮಾಡಬೇಡ ಎಂದು ಕೂಡ ಹೇಳಿದ್ದಾರೆ. ಆದರೂ, ಅವರು ಗೇಮ್ ಆಡುವುದನ್ನು ಬಿಟ್ಟು ಕೆಲಸಕ್ಕೆ ಮಾತ್ರ ಮರಳಿಲ್ಲ.