ಕರ್ನಾಟಕ

karnataka

ETV Bharat / bharat

ತಂದೆ ಎಂದಿಗೂ ಪ್ರಶಸ್ತಿಗಳ ಹಿಂದೆ ಬಿದ್ದವರಲ್ಲ: ಎಂ.ಎಸ್​.ಸ್ವಾಮಿನಾಥನ್​ ಪುತ್ರಿ ಸೌಮ್ಯ

ನನ್ನ ತಂದೆಯ ಕಾರ್ಯವನ್ನು ಭಾರತ ಸರ್ಕಾರ ಗುರುತಿಸಿರುವುದಕ್ಕೆ ಹೆಮ್ಮೆ ಅನ್ನಿಸಿತು ಎಂದು 'ಭಾರತ ರತ್ನ' ದಿ.ಎಂ.ಎಸ್​.ಸ್ವಾಮಿನಾಥನ್​ ಅವರ ಪುತ್ರಿ ಡಾ.ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ.

MS-Swaminathan's-Daughter Sowmya
ಎಂ.ಎಸ್​.ಸ್ವಾಮಿನಾಥನ್​ ಪುತ್ರಿ ಸೌಮ್ಯ

By ETV Bharat Karnataka Team

Published : Feb 9, 2024, 9:08 PM IST

ಕಾಸರಗೋಡು(ಕೇರಳ): ದೇಶದ ಹಸಿರು ಕ್ರಾಂತಿಯ ಪಿತಾಮಹರೆಂದೇ ಖ್ಯಾತರಾದ ದಿ. ಎಂ.ಎಸ್.ಸ್ವಾಮಿನಾಥನ್​ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭಾರತ ರತ್ನ ಪ್ರಶಸ್ತಿ ಘೋಷಿಸಿರುವ ಬಗ್ಗೆ ಪುತ್ರಿ ಡಾ.ಸೌಮ್ಯ ಸ್ವಾಮಿನಾಥನ್ ಸಂತಸ ವ್ಯಕ್ತಪಡಿಸಿದರು. ತಮ್ಮ ತಂದೆ ಎಂದಿಗೂ ಪ್ರಶಸ್ತಿಗಳ ಹಿಂದೆ ಬಿದ್ದಿರಲಿಲ್ಲ. ಅವರ ಜೀವತಾವಧಿಯಲ್ಲೇ ಈ ಗೌರವ ಪಡೆದಿದ್ದರೆ ಇನ್ನಷ್ಟು ಖುಷಿಯಾಗುತ್ತಿತ್ತು ಎಂದರು.

ಮಾಜಿ ಪ್ರಧಾನಿಗಳಾದ ಚರಣ್​ ಸಿಂಗ್, ಪಿ.ವಿ.ನರಸಿಂಹ ರಾವ್​ ಅವರೊಂದಿಗೆ ಡಾ.ಎಂ.ಎಸ್.ಸ್ವಾಮಿನಾಥನ್​ಗೂ ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ ಭಾರತ ರತ್ನ ಪ್ರಕಟಿಸಲಾಗಿದೆ. ಈ ಕುರಿತು ಕೇರಳದ ಕಾಸರಗೋಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನನ್ನ ತಂದೆಯ ಕಾರ್ಯವನ್ನು ಭಾರತ ಸರ್ಕಾರ ಗುರುತಿಸಿರುವುದಕ್ಕೆ ನನಗೆ ಹೆಮ್ಮೆಯಾಗಿದೆ. ರೈತರು ಮತ್ತು ಸಾಮಾನ್ಯ ಜನರಿಗಾಗಿ ಮಾಡಿದ ಕೆಲಸಕ್ಕೆ ಸಂದ ಮನ್ನಣೆ ಇದು. ಅವರು ಪ್ರಶಸ್ತಿಗಳ ಹಿಂದೆ ಎಂದೂ ಬಿದ್ದವರಲ್ಲ. ಪ್ರಶಸ್ತಿಗಳಿಗಾಗಿ ಯಾವತ್ತೂ ಅವರು ಕೆಲಸ ಮಾಡಿಲ್ಲ'' ಎಂದು ಹೇಳಿದರು.

ಇದನ್ನೂ ಓದಿ:'ಭಾರತದ ಹಸಿರು ಕ್ರಾಂತಿಯ ಪಿತಾಮಹ' ಸ್ವಾಮಿನಾಥನ್ ಬಗ್ಗೆ ನಿಮಗೆ ಗೊತ್ತಿರಬೇಕಾದ ಮಾಹಿತಿ

''ಸ್ವಾಮಿನಾಥನ್ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಮತ್ತು ಮನ್ನಣೆಗಳು ಸಿಕ್ಕಿವೆ. ಆದರೆ, ನೆಲಮಟ್ಟದಲ್ಲಿ ಬರುತ್ತಿದ್ದ ಫಲಿತಾಂಶಗಳು ಮತ್ತು ತಮ್ಮ ಸುತ್ತಲಿನ ಜನರು, ರೈತರಿಂದಲೇ ಅವರು ಹೆಚ್ಚು ಪ್ರೇರೇಪಣೆಗೊಂಡವರು. ಈ ಭಾರತ ರತ್ನ ಗೌರವ ತಮ್ಮ ತಂದೆ ಬದುಕಿದ್ದಾಗ ಪಡೆದಿದ್ದರೆ ಮತ್ತಷ್ಟು ಖುಷಿಯಾಗುತ್ತಿತ್ತು'' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದುವರೆದು, ''ಸ್ವಾಮಿನಾಥನ್​ ಅವರು ಹೋದಲ್ಲೆಲ್ಲಾ ರೈತರು ಅವರನ್ನು ಭೇಟಿಯಾಗಿ ತಮ್ಮ ಪ್ರೀತಿ ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದರು. ಇದೇ ಅವರಿಗೆ ಉತ್ತೇಜನ ನೀಡುತ್ತಿತ್ತು'' ಎಂದು ತಿಳಿಸಿದರು.

''ಇದೀಗ ಈ ಮನ್ನಣೆಯು ದೇಶದ ಯುವಕರಿಗೆ ಬಹಳ ಬಲವಾದ ಸಂದೇಶವನ್ನು ನೀಡುತ್ತದೆ. ಕೇವಲ ಚಲನಚಿತ್ರ ತಾರೆಯರು ಮತ್ತು ಸೆಲೆಬ್ರಿಟಿಗಳನ್ನು ಅನುಕರಿಸಬೇಕೆಂದಲ್ಲ. ಆದರೆ, ತಮ್ಮಷ್ಟಕ್ಕೆ ತಾವು ಕೆಲಸ ಮಾಡುವ ಮತ್ತು ಪ್ರಚಾರದಿಂದ ದೂರ ಇರುವ ವಿಜ್ಞಾನಿಗಳನ್ನೂ ಯುವಕರು ಅನುಕರಿಸಬೇಕು'' ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದರು.

ಹಸಿರು ಕ್ರಾಂತಿಯ ಪಿತಾಮಹ ಎಂದೇ ಹೆಸರುವಾಸಿಯಾಗಿದ್ದ ಸ್ವಾಮಿನಾಥನ್ ತಮ್ಮ 98ನೇ ವಯಸ್ಸಿನಲ್ಲಿ 2023ರಂದು ಸೆಪ್ಟೆಂಬರ್ 28ರಂದು ಚೆನ್ನೈನಲ್ಲಿ ನಿಧನ ಹೊಂದಿದ್ದರು. ದೇಶದಲ್ಲಿ 1970-80ರ ಆಹಾರದ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೃಷಿಯ ಬಗ್ಗೆ ಅಧ್ಯಯನ ನಡೆಸಿದ್ದರು. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಮ್ಯಾಗ್ಸೆಸೆ ಪ್ರಶಸ್ತಿ ಮತ್ತು ವಿಶ್ವ ಆಹಾರ ಪ್ರಶಸ್ತಿ ಸೇರಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಇದನ್ನೂ ಓದಿ:ಸ್ವಾಮಿನಾಥನ್​, ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚರಣ್​​​​ ಸಿಂಗ್​ಗೆ ಭಾರತ ರತ್ನದ ಗರಿ

ABOUT THE AUTHOR

...view details