ಗಡ್ಚಿರೋಲಿ (ಮಹಾರಾಷ್ಟ್ರ):ಇದು ಆಡಳಿತ ವ್ಯವಸ್ಥೆಯ ವೈಫಲ್ಯವೋ?, ಜನರ ಹಟಮಾರಿ ಧೋರಣೆಯೋ ಎಂಬುದು ತಿಳಿಯುತ್ತಿಲ್ಲ. ಮೂಢನಂಬಿಕೆ ಮತ್ತು ಸೌಲಭ್ಯಗಳ ಕೊರತೆಗೆ ಇಬ್ಬರು ಮಕ್ಕಳ ಪ್ರಾಣ ಹಾರಿ ಹೋಗಿದೆ. ಸೂಕ್ತ ಸಮಯದಲ್ಲಿ ಆಂಬ್ಯುಲೆನ್ಸ್ ಸಿಗದ್ದಕ್ಕೆ ಕುಟುಂಬಸ್ಥರು ಮಕ್ಕಳಿಬ್ಬರನ್ನು ಹೆಗಲ ಮೇಲೆ ಹೊತ್ತುಕೊಂಡು 15 ಕಿಮೀ ದೂರ ಸಾಗಿದ್ದಾರೆ. ಈ ದುರದೃಷ್ಟಕರ ಘಟನೆ ನಡೆದಿದ್ದು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ.
ಇಲ್ಲಿನ ಯರಂಗಡ ಪ್ರದೇಶದ ಇಬ್ಬರು ಮಕ್ಕಳು ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ, ಮಕ್ಕಳು ಚಿಕಿತ್ಸೆ ಸ್ಪಂದಿಸದೇ ಒಬ್ಬರ ಹಿಂದೆ ಒಬ್ಬರು ಮೃತಪಟ್ಟರು. ವೈದ್ಯರು ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ಮಾಡಲು ಮುಂದಾದಾಗ, ಕುಟುಂಬಸ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಮಕ್ಕಳ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಯಿಂದ ಹೊರಹೋಗಿದ್ದಾರೆ.
ಘಟನೆಯ ವಿವರ:6 ಮತ್ತು 3 ವರ್ಷದ ಇಬ್ಬರು ಮಕ್ಕಳಿಗೆ ತೀವ್ರ ಜ್ವರ ಬಾಧಿಸಿದೆ. ಕುಟುಂಬಸ್ಥರ ಮೂಢನಂಬಿಕೆ ಮತ್ತು ಹುಂಬತನದಿಂದ ಅವರನ್ನು ಪಾದ್ರಿಯ ಬಳಿಗೆ ಕರೆದುಕೊಂಡು ಹೋಗಲಾಗಿದೆ. ಆತ ಮಕ್ಕಳಿಗೆ ಯಾವುದೇ ಗಿಡಮೂಲಿಕೆ ಔಷಧ ನೀಡಿದ್ದಾನೆ. ಇದರಿಂದ ಮಕ್ಕಳ ಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ತಕ್ಷಣವೇ ಅವರನ್ನು ಜೀಮಲಗಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರ ಕರೆತಂದಿದ್ದಾರೆ. ಅಷ್ಟರೊಳಗೆ ಮಕ್ಕಳಿ ಸ್ಥಿತಿ ಚಿಂತಾಜನಕವಾಗಿತ್ತು.